ADVERTISEMENT

‘ಮೂಲಸೌಲಭ್ಯಗಳಿಗೆ ಪ್ರಥಮ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 12:56 IST
Last Updated 31 ಡಿಸೆಂಬರ್ 2019, 12:56 IST
ಅರುಣಾ ಆನಂದ್‌ ಕುಮಾರ್‌
ಅರುಣಾ ಆನಂದ್‌ ಕುಮಾರ್‌   

ದೊಡ್ಡಬಳ್ಳಾಪುರ: ‘ದರ್ಗಾಜೋಗಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳಿಂದ ₹ 3 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ’ ಎಂದು ದರ್ಗಾಜೋಗಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅರುಣಾ ಬಿ.ಸಿ.ಆನಂದ್‌ ಕುಮಾರ್‌ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ‘ದರ್ಗಾಜೋಗಹಳ್ಳಿ ಕ್ಷೇತ್ರ ನಗರದ ಅಂಚಿನಲ್ಲಿ ಇರುವುದರಿಂದ ನಗರ ಮತ್ತು ಗ್ರಾಮಾಂತರ ಪ್ರದೇಶ ಎರಡನ್ನೂ ಒಳಗೊಂಡಿದೆ. ಹೀಗಾಗಿ ಕುಡಿಯುವ ನೀರು, ರಸ್ತೆ, ಚರಂಡಿಯಂತಹ ಮೂಲಭೂತ ಸೌಲಭ್ಯಗಳ ಅಗತ್ಯ ಹೆಚ್ಚಾಗಿದೆ. ಹೆಚ್ಚಿನ ಅನುದಾನವನ್ನು ಇವುಗಳ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ’ ಎಂದರು.

‘ಪ್ರತಿ ಗಲ್ಲಿಗೂ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಲಾಗಿದೆ. ದರ್ಗಾಜೋಗಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಕರೇನಹಳ್ಳಿ ಭಾಗವೂ ಸೇರಿದೆ. ಇದಕ್ಕೆ ನಗರಸಭೆ ವ್ಯಾಪ್ತಿಗಳೂ ಸೇರಿವೆ. ಇಲ್ಲಿ ಜನವಸತಿ ಹೆಚ್ಚು. ಹೀಗಾಗಿ ಇಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ’ ಎಂದರು.

ADVERTISEMENT

‘ಗ್ರಾಮಾಂತರ ಪ್ರದೇಶದ ಜಿಂಕೆಬಚ್ಚಹಳ್ಳಿ - ಮಜರಾಹೊಸಹಳ್ಳಿ, ನಾಗದೇನಹಳ್ಳಿ - ಆದಿನಾರಾಯಣ ಹೊಸಹಳ್ಳಿ ಈ ಭಾಗದ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಆದಿನಾರಾಯಣ ಹೊಸಹಳ್ಳಿ ಗ್ರಾಮದಲ್ಲಿ ₹ 8 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ದರ್ಗಾಜೋಗಹಳ್ಳಿ ಕ್ಷೇತ್ರ ಹೊಸದಾಗಿ ರಚನೆಗೊಂಡಿದೆ. ತಾಲ್ಲೂಕಿನ ಇತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಹೋಲಿಸಿದರೆ ಜನವಸತಿ ಹೆಚ್ಚಾಗಿ ಇರುವುದೇ ಇಲ್ಲಿ. ಹೀಗಾಗಿ ಸರ್ಕಾರ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.