ವಿಜಯಪುರ (ದೇವನಹಳ್ಳಿ): ಹೋಬಳಿಯಾದ್ಯಂತ ಶ್ರಾವಣ ಮಾಸದ ಮೊದಲ ಶನಿವಾರದಂದು ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಹಾಗೂ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತರ ದಂಡು ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ಲಗ್ಗೆ ಇಟ್ಟು, ದರ್ಶನ ಪಡೆದು, ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ವೈಷ್ಣವ ದೇವಾಲಯಗಳಿಗೆ ಶ್ರಾವಣ ಮಾಸ ವಿಶೇಷವಾಗಿದ್ದು, ಲಕ್ಷ್ಮೀವೆಂಕಟರಮಣ ಸೇರಿದಂತೆ ಇತರೆ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು, ಅಲಂಕಾರ ಅದ್ಧೂರಿಯಾಗಿ ಜರುಗಿದವು. ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಕೋಲಾರ ಮುಖ್ಯ ರಸ್ತೆಯಲ್ಲಿರುವ ಶ್ರೀಕ್ಷೇತ್ರ ಹಾರ್ಡಿಪುರ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆಗಳು ನಡೆದವು. ಭಕ್ತರ ದಂಡು ಆಗಮಿಸಿ ದೇವರ ದರ್ಶನ ಪಡೆದರು.
ಪಟ್ಟಣದ ಕೆರೆ ಕೋಡಿ ಬಳಿಯಿರುವ ಶನೈಶ್ಚರಸ್ವಾಮಿ, ಅಯ್ಯಪ್ಪಸ್ವಾಮಿ, ಪಂಚಮುಖಿ ಆಂಜನೇಯ, ಬಲಿಜಪೇಟೆಯ ಲಕ್ಷ್ಮೀವೆಂಕಟರಮಣ ಸ್ವಾಮಿ, ಪುರ ಗ್ರಾಮದ ಶನೈಶ್ವರಸ್ವಾಮಿ, ದೇವನಹಳ್ಳಿ ರಸ್ತೆಯ ವೀರಾಂಜನೇಯಸ್ವಾಮಿ, ಶಿಡ್ಲಘಟ್ಟ ರಸ್ತೆಯ ಅಭಯ ಆಂಜನೇಯ ದೇಹುಲ ಮತ್ತು ಭಟ್ರೇನಹಳ್ಳಿ ಸಾಯಿಜ್ಞಾನಮಂದಿರ ಸೇರಿದಂತೆ ಅನೇಕ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಶ್ರಾವಣ ಮಾಸದ ಶನಿವಾರದ ಅಂಗವಾಗಿ ದೇವಾಲಯಗಳಲ್ಲಿ ಅಭಿಷೇಕ, ಸುಪ್ರಭಾತ ಸೇವೆ ನಡೆದವು. ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಭಜನೆ, ಗಾಯನ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.