ADVERTISEMENT

ಬೇಸಿಗೆಗೂ ಮುನ್ನವೇ ಮೇವಿಗೆ ಪರದಾಟ: ಆಹಾರ ಒದಗಿಸಲಾಗದೆ ಹಸು ಮಾರುತ್ತಿರುವ ರೈತರು

ಹಾಲು ಉತ್ಪಾದನೆ ಕುಸಿತ

ಎಂ.ಮುನಿನಾರಾಯಣ
Published 7 ಮಾರ್ಚ್ 2024, 4:53 IST
Last Updated 7 ಮಾರ್ಚ್ 2024, 4:53 IST
ವಿಜಯಪುರದ ರೈತರೊಬ್ಬರು ಮೇವು ಸಾಗಿಸುತ್ತಿರುವುದು
ವಿಜಯಪುರದ ರೈತರೊಬ್ಬರು ಮೇವು ಸಾಗಿಸುತ್ತಿರುವುದು   

ವಿಜಯಪುರ(ದೇವನಹಳ್ಳಿ): ಬೇಸಿಗೆ ಆರಂಭಕ್ಕೂ ಮುನ್ನವೇ ಮೇವು ಕೊರತೆ ಆರಂಭವಾಗಿದ್ದು, ಹೋಬಳಿಯ ಹೈನುದಾರರು ಜಾನುವಾರುಗಳಿಗೆ ಆಹಾರ ಒದಗಿಸಲು ಪರದಾಡುತ್ತಿದ್ದಾರೆ.

ಬರಗಾಲ ಹಾಗೂ ಬೇಸಿಗೆ ಆರಂಭದ ಮೊದಲೇ ಸುಡು ಬಿಸಿಲು ಆವರಿಸಿರುವುದರಿಂದ ಮೇವು ಮತ್ತು ನೀರಿಗೆ ಹಾಹಾಕಾರ ಉಂಟಾಗಿದೆ.

ಹೋಬಳಿಯ ಬಹುತೇಕ ರೈತರು ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಹುಸು, ಕುರಿ–ಮೇಕೆಗಳಿಗೆ ಬಯಲಿನಲ್ಲಿ ಹಸಿರು ಮೇವು ಸಿಗುತ್ತಿತು. ಜತೆಗೆ ಇವುಗಳಿಗಾಗಿಯೇ ಮೇವಿನ ಬೆಳೆ ಬೆಳೆಯಲಾಗುತ್ತಿತು. ಬಿಸಿಲಿನಿಂದ ಬಯಲಿನ ಮೇವು ಸಂಪೂರ್ಣ ಒಣಗಿ ಹೋಗಿದೆ. ನೀರಿನ ಕೊರತೆಯಿಂದ ಮೇವಿನ ಬೆಳೆಯಲು ಆಗುತ್ತಿಲ್ಲ. ಇದರಿಂದ ಮೇವು ಸಮಸ್ಯೆ ಉಲ್ಬಣಿಸಿದೆ.

ADVERTISEMENT

ಈ ಸಮಸ್ಯೆಯಿಂದ ಹಾಲು ಉತ್ಪಾದನೆ ಕೂಡ ಕುಸಿದಿದ್ದು, ಜಾನುವಾರುಗಳಿಗೆ ಮೇವು–ನೀರು ಒದಗಿಸಲಾಗಿದೆ ಕೆಲವು ರೈತರು ಅವುಗಳನ್ನು ಚಿಂತಾಮಣಿಯ ದನಗಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ನೀರಾವರಿ ವ್ಯವಸ್ಥೆ ಇರುವ ರೈತರು ಮೇವಿನ ಸಮಸ್ಯೆ ನೀಗಿಸಲು ಜೋಳದ ಬೆಳೆ ಕಟಾವು ಮಾಡುತ್ತಿದ್ದಾರೆ. ಹೈನುಗಾರಿಕೆ ಮಾಡದ ರೈತರು ಹಸಿರು ಮೇವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಟ್ರ್ಯಾಕ್ಟರ್ ಹಸಿ ಜೋಳದ ಕಡ್ಡಿಯ ಲೋಡು ₹18ಸಾವಿರಕ್ಕೆ ನಿಗದಿಪಡಿಸಲಾಗಿದೆ. ಒಣ ಜೋಳದ ಕಡ್ಡಿ ಒಂದು ಲೋಡು ₹9 ಸಾವಿರ, ರಾಗಿ ಹುಲ್ಲು ಒಂದು ಕಟ್ಟು (ಬೇಲ್– 22 ಕೆ.ಜಿ) ₹300ಗೆ ಏರಿಕೆಯಾಗಿದೆ. ಇದರಿಂದ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಿದೆ.

ಈ ಬಾರಿ ತಾಲ್ಲೂಕಿನಲ್ಲಿ ಮಳೆಯ ಅಭಾವದಿಂದಾಗಿ ಕೃಷಿ ಚಟುವಟಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಮೇವು ಒದಗಿಸುವುದು ಸವಾಲಿನ ಕೆಲಸವಾಗುತ್ತಿದೆ. ಕುರಿಗಳನ್ನು ಹೊರಗೆ ಕರೆದುಕೊಂಡು ಹೋದರೆ ಬಯಲಿನಲ್ಲಿ ಮೇವು ಸಿಗುತ್ತಿಲ್ಲ. ಸುಡುವ ಬಿಸಿಲಿನಲ್ಲಿ ಸುತ್ತಾಡಿ, ಸುತ್ತಾಡಿ ಕುರಿಗಾಹಿಗಳು ಸೊರಗಿ ಹೋಗುತ್ತಿದ್ದಾರೆ.

ಹೋಬಳಿಯಲ್ಲಿ ಉಂಟಾಗಿರುವ ಮೇವು–ನೀರಿನ ಸಮಸ್ಯೆ ನಿವಾರಣೆಗೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು ಹಾಗೂ ಮೇವು ಬ್ಯಾಂಕ್‌ ತೆರೆಯಬೇಕು ಎಂದು ಹೈನುದಾರರು ಒತ್ತಾಯಿಸಿದ್ದಾರೆ.

ವಿಜಯಪುರ ಹೋಬಳಿ ದಂಡಿಗಾನಹಳ್ಳಿ ರಸ್ತೆಯಲ್ಲಿ ಹೊಲವೊಂದರಲ್ಲಿ ಮೇವು ಹುಡುಕುತ್ತಿರುವ ಕುರಿಗಳು
ಜಿಲ್ಲೆಯ 17 ಹೋಬಳಿಗಳಲ್ಲಿ ಪ್ರತಿ ಹೋಬಳಿಯಲ್ಲಿ 100 ಟನ್ ನಷ್ಟು ಮೇವು ಶೇಖರಣೆ ಮಾಡಲು ಸಚಿವರು ಸೂಚನೆ ಕೊಟ್ಟಿದ್ದಾರೆ. ಜತೆಗೆ ಮೇವು–ನೀರು ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮವಹಿಸಲಾಗುತ್ತಿದೆ
–ಜಗದೀಶ್ ಉಪನಿರ್ದೇಶಕ ಪಶು ಪಾಲನಾ ಇಲಾಖೆ
ಬೇಸಿಗೆಯಲ್ಲಿ ರಾಸುಗಳಿಗೆ ಮೇವು ಒದಗಿಸುವುದು ಸವಾಲಿನ ಕೆಲಸವಾಗಿದೆ. ದುಡಿಮೆ ಮಾಡಿದ ಹಣವೆಲ್ಲಾ ಮೇವಿಗಾಗಿ ಖರ್ಚು ಮಾಡಬೇಕಾಗಿದೆ. ಸರ್ಕಾರ ನಮ್ಮತ್ತ ನೋಡಿ ಸಮಸ್ಯೆ ಬಗೆಹರಿಸಲಿ
ನಾರಾಯಣಪ್ಪ ರೈತ
‘37 ವಾರಗಳಿಗೆ ಆಗುವಷ್ಟು ಸಂಗ್ರಹವಿದೆ’
‘ಜಿಲ್ಲೆಯಲ್ಲಿ ನೀರಾವರಿ ಹೊಂದಿರುವ ರೈತರಿಗೆ ಈಗಾಗಲೇ ಮೇವಿನ ಬೀಜ ವಿತರಣೆ ಮಾಡಿದ್ದೇವೆ. ಮೇವು ಬರುತ್ತಿದೆ. 42476 ರೈತರಿಗೆ ಮೇವಿನ ಬೀಜಗಳ ಮಿನಿ ಕಿಟ್ ವಿತರಣೆ ಮಾಡಿದ್ದೇವೆ. 56513 ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿ ಬೆಳೆದಿದ್ದು ಅದರಿಂದ ಹುಲ್ಲು ಲಭ್ಯವಿದೆ. 56 ಹೆಕ್ಟೇರ್ ಮುಸುಕಿನ ಜೋಳ 61 ಹೆಕ್ಟೇರ್ ಭತ್ತ ಬೆಳೆದಿದ್ದು ಮೇವು ಸಿಗುತ್ತಿದೆ. 37 ವಾರಗಳಿಗೆ ಸರಿಹೊಂದುವಷ್ಟು ಮೇವು ಇದೆ. ಭೂ ರಹಿತ ರೈತರಿಗೆ ಅಗತ್ಯಬಿದ್ದರೆ ಮೇವು ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಸೂಚಿಸಿರುವಂತೆ ಟೆಂಡರ್ ನಡೆಸಲು ಸಿದ್ಧ ಮಾಡಿಕೊಂಡಿದ್ದೇವೆ ಎಂದು ಪಶು ಪಾಲನಾ ಇಲಾಖೆ ಉಪನಿರ್ದೇಶಕ ಜಗದೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.