ದೊಡ್ಡಬಳ್ಳಾಪುರ: ನಮ್ಮ ಕಲೆ, ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವಲ್ಲಿ ಯುವ ಜನರ ಪಾತ್ರ ಮಹತ್ವದ್ದಾಗಿದ್ದು, ಯುವ ಜನತೆ ಎಲ್ಲಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಇತರರಿಗೂ ಪ್ರೇರಣೆಯಾಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ಅನುರಾಧ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಉತ್ತರ ವಿಶ್ವ ವಿದ್ಯಾನಿಲಯ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಯುವ ಜನೋತ್ಸವ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಲೆಗಳ ಬಗ್ಗೆ ಜನರಿಗೆ ಆಸಕ್ತಿ ಕುಂದುತ್ತಿದೆ. ಮಕ್ಕಳು ಮತ್ತು ಯುವಜನರು ಮೊಬೈಲ್ ಅನ್ನು ಬದಿಗಿಟ್ಟು, ಶಿಕ್ಷಣಕ್ಕೆ ಅದ್ಯತೆ ನೀಡಬೇಕು. ಅದರಲ್ಲೂ ಯುವ ಸಮೂಹದವರೂ ಶಿಕ್ಷಣ, ವಿವಿಧ ವೃತ್ತಿಪರ ಕೋರ್ಸ್‌ಗಳೊಂದಿಗೆ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಜಾನಪದ ಕಲೆಗಳನ್ನು ಬೆಳೆಸುವಲ್ಲಿ ಮುಂದಾಗಬೇಕೆಂದು ಹೇಳಿದರು.
ಈ ರೀತಿಯ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಮ್ಮ ಜಾನಪದ ಕಲೆ, ಸಂಸ್ಕೃತಿಯನ್ನು ದೇಶವ್ಯಾಪಿ ಪ್ರಚುರಪಡಿಸಲು ಯುವ ಪೀಳಿಗೆ ಶ್ರಮ ವಹಿಸಬೇಕು ಎಂದರು.
ಶಾಸಕ ಧೀರಜ್ ಮುನಿರಾಜು ಸ್ಪರ್ಧೆಗಳನ್ನು ವೀಕ್ಷಿಸಿ ಶುಭ ಕೋರಿ, ಮತ್ತು ವಿಜ್ಞಾನ ಮೇಳವನ್ನು ವೀಕ್ಷಿಸಿ ಸ್ಪರ್ಧಾರ್ಥಿಗಳಿಗೆ ಶುಭಕೋರಿ, ಯುವ ಜನತೆಗೆ ಶಿಕ್ಷಣದೊಂದಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹ ಮುಖ್ಯವಾಗಿವೆ. ದೇಶದ ಅಭಿವೃದ್ಧಿಯಲ್ಲಿ ಯುವ ಜನತೆ ಪಾತ್ರ ಮಹತ್ವದ್ದಾಗಿದೆ. ಯುವ ಜನರ ಕ್ರಿಯಾಶೀಲತೆಗೆ ಯುವಜನೋತ್ಸವ ಕಾರ್ಯಕ್ರಮಗಳು ಇಂಬು ನೀಡುತ್ತವೆ ಎಂದರು.
ಜಾನಪದ ಗೀತೆ, ನೃತ್ಯ, ಚಿತ್ರಕಲೆ ಹಾಗೂ ಕವಿತೆ ಬರೆಯುವ ಸ್ಪರ್ಧೆ ಮತ್ತು ವಿಜ್ಞಾನ ಮೇಳ ಸೇರಿದಂತೆ ಇತರೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಮತ್ತು ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ಪಡೆದರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲು ಅರ್ಹರಾಗಿದ್ದಾರೆ.
ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮೀ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸದಾಶಿವರಾಮಚಂದ್ರಗೌಡ, ಜಾನಪದ ವಿದ್ವಾಂಸ ಗುರುಬಸವರಾಜು, ಗಾಯಕ ಮೋಹನ್‌ಕುಮಾರ್, ನೆಹರು ಯುವ ಕೇಂದ್ರದ ಸಹಾಯಕ ನಿರ್ದೇಶಕಿ ಶ್ರೀವಾಣಿ ಇದ್ದರು.
ಯುವಕರು ಪ್ರತಿ ಗ್ರಾಮದಲ್ಲಿರುವ ಅರಿವು(ಗ್ರಂಥಾಲಯ) ಕೇಂದ್ರಗಳ ಪ್ರಯೋಜನ ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು -ಕೆ.ಎನ್. ಅನುರಾಧ ಸಿಇಒ ಜಿ.ಪಂ
]ಸ್ಪರ್ಧೆಗಳ ವಿಜೇತರು ಜಾನಪದ ಗೀತೆ: ಪವನ್ ಮತ್ತು ತಂಡ ನೆಲಮಂಗಲ (ಪ್ರ) ಲಕ್ಷ್ಮಿ ಲಲಿತಾ ನಾಟ್ಯಕಲಾ ಸಂಘ ದೊಡ್ಡಬಳ್ಳಾಪುರ (ದ್ವಿ) ಭೂಮಿಕ ಮತ್ತು ತಂಡ ದೊಡ್ಡಬಳ್ಳಾಪುರ (ತೃ. ಜಾನಪದ ನೃತ್ಯ: ಮಾತೃಭೂಮಿ ಡೊಳ್ಳು ಸಂಘ ದೇವನಹಳ್ಳಿ (ಪ್ರ) ಗಗನ ಮತ್ತು ತಂಡ ದೇವನಹಳ್ಳಿ (ದ್ವಿ) ನಯನ ಮತ್ತು ತಂಡ ದೇವನಹಳ್ಳಿ (ತೃ). ಚಿತ್ರಕಲೆ: ರಾಹುಲ್ ಕುಮಾರ್ (ಪ್ರ) ಕುಸುಮ ಎಂ.ಜಿ (ದ್ವಿ) ಎಂ.ಬಿ. ಕಿರಣ್ (ತೃ) ಕವಿತೆ ಬರೆಯುವ ಸ್ಪರ್ಧೆಯಲ್ಲಿ: ಜಿ.ಎನ್. ಅಕ್ಷಯ್(ಪ್ರ) ಡಿ.ಎನ್.ವಿಜಯ್(ದ್ವಿ) ಎನ್.ಸಿಂಧೂ (ತೃ) ಕಥೆ ಬರೆಯುವ: ಕೆ.ಎಸ್.ಮಧುಶ್ರೀ (ಪ್ರ) ಸಿಂಧು (ದ್ವಿ) ಎನ್.ಮಂಜು (ತೃ). ಭಾಷಣ: ಕೆ.ಎಸ್.ಮಧುಶ್ರೀ(ಪ್ರ) ರಾಘುಶೆಟ್ಟಿ (ದ್ವಿ) ಜಿ.ಎ.ಅಕ್ಷಯ್(ತೃ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.