ADVERTISEMENT

ರೈಲ್ವೆ ಫ್ಲೈಓವರ್‌ ನಿರ್ಮಾಣಕ್ಕೆ ಒತ್ತಾಯ 

ಐವಿಸಿ ರಸ್ತೆ ಅಂಡರ್ ಪಾಸ್ ರಸ್ತೆ ನಿರ್ಮಾಣಕ್ಕೆ ಆಕ್ಷೇಪ–36ಕ್ಕೂ ಹೆಚ್ಚು ಗ್ರಾಮಗಳ ಅವಲಂಬನೆ

ವಡ್ಡನಹಳ್ಳಿ ಬೊಜ್ಯನಾಯ್ಕ
Published 2 ಫೆಬ್ರುವರಿ 2019, 19:30 IST
Last Updated 2 ಫೆಬ್ರುವರಿ 2019, 19:30 IST
ಅಂಡರ್ ಪಾಸ್ ರಸ್ತೆ ನಿರ್ಮಾಣಕ್ಕೆ ಗುರುತಿಸಿರುವ ಜಾಗ 
ಅಂಡರ್ ಪಾಸ್ ರಸ್ತೆ ನಿರ್ಮಾಣಕ್ಕೆ ಗುರುತಿಸಿರುವ ಜಾಗ    

ದೇವನಹಳ್ಳಿ: ನಗರದ ರಾಷ್ಟ್ರೀಯ ಹೆದ್ದಾರಿ 7ರ ಐವಿಸಿ ರಸ್ತೆ ರೈಲ್ವೆ ಕ್ರಾಸಿಂಗ್ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಡರ್‌ ಪಾಸ್ ರಸ್ತೆ ಬೇಡ, ಬದಲಿಗೆ ಫ್ಲೈಓವರ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದರು.

ಐವಿಸಿ ರಸ್ತೆ ಮೂಲಕ ಹಾದು ಹೋಗುವ ಮಾರ್ಗದ ಅಕ್ಕಪಕ್ಕದಲ್ಲಿ ರಾಜಾನುಕುಂಟೆ ದೊಡ್ಡಬಳ್ಳಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಸುತ್ತಲಿನ ಪ್ರದೇಶದಲ್ಲಿ 36 ಕ್ಕಿಂತ ಹೆಚ್ಚು ಗ್ರಾಮಗಳು ಈ ಏಕೈಕ ರಸ್ತೆಯನ್ನು ಅವಲಂಬಿಸಿವೆ.

ಪ್ರಸ್ತುತ 350 ಅಡಿ ಅಗಲದ ರಸ್ತೆಗೆ 12 ರಿಂದ 15 ಅಡಿ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡುವುದರಿಂದ ಅಗತ್ಯ ವಸ್ತುಗಳ ಸರಕು ಸಾಗಾಣಿಕೆ ಲಾರಿ ಇತರೆ ವಾಹನಗಳು ಸಂಚಾರ ಮಾಡಲು ಸಾಧ್ಯವಿಲ್ಲ. ಈಗಾಗಲೇ ಬೇರೆಡೆ ನಿರ್ಮಾಣ ಮಾಡಿರುವ ಅಂಡರ್‌ ಪಾಸ್‌ಗಳು ರಸ್ತೆಗಳು ಬಳಕೆಯಾಗದೆ ಮೂಲೆಗೆ ಸರಿದಿವೆ. ಸಾರ್ವಜನಿಕರ ಮತ್ತು ಭವಿಷ್ಯದ ದೃಷ್ಟಿಯಿಂದ ಉದ್ದೇಶಿತ ಅಂಡರ್‌ ಪಾಸ್ ಕಾಮಗಾರಿ ಕೈಬಿಟ್ಟು ಫ್ಲೈಓವರ್ ರಸ್ತೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯ.

ADVERTISEMENT

ಭೂವನಹಳ್ಳಿ ಬಂಡೆಕೆರೆ, ದೇವನಹಳ್ಳಿ ಕೋಟೆ ಹಿಂಭಾಗ, ಅತ್ತಿಬೆಲೆ, ಬುಳ್ಳಹಳ್ಳಿ ಗೇಟ್ ಬಳಿ ಈಗಾಗಲೇ ಅಂಡರ್‌ಪಾಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಸೀಮಿತ. ಬದಲಿಗೆ ಶಾಲಾ ಕಾಲೇಜುಗಳ ಬಸ್ ಸಂಚಾರಕ್ಕೆ ಸಾಧ್ಯವಿಲ್ಲ. ಮಳೆಗಾಲದಲ್ಲಿ ಅಂಡರ್ ಪಾಸ್ ರಸ್ತೆಗಳಲ್ಲಿ ಮಳೆ ನೀರು ಕೆರೆಯಂತೆ ತುಂಬಿರುತ್ತವೆ. ಸ್ಥಳೀಯರು ಯಾವುದೇ ಒತ್ತಾಯ ಮಾಡಿಲ್ಲ. ಏಕಾಏಕಿ ಅಂಡರ್ ಪಾಸ್ ನಿರ್ಮಾಣಕ್ಕೆ ಮುಂದಾಗಿರುವುದು ಅವೈಜ್ಞಾನಿಕ ಎಂದು ಭೂವನಹಳ್ಳಿ ಗ್ರಾಮದ ತಿಪ್ಪಣ್ಣ ನಾಯಕ ಆರೋಪಿಸಿದರು.

ಹತ್ತು ವರ್ಷಗಳ ಹಿಂದೆ ಭೂವನಹಳ್ಳಿ ಬಳಿಯ ರೈಲ್ವೆ ಗೇಟ್ ಸಂಪೂರ್ಣ ಮುಚ್ಚಿದ ಪರಿಣಾಮ ಬೆಂಗಳೂರಿನಿಂದ ಭೂವನಹಳ್ಳಿ ಮಾರ್ಗವಾಗಿ ಅಣ್ಣೇಶ್ವರ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಗ್ರಾಮಗಳ ಜನರು ಐದಾರು ಕಿ.ಮೀ ಸುತ್ತಿ ಬಳಸಿ ಹೋಗಬೇಕು. ಕನ್ನಮಂಗಲ ಪಾಳ್ಳಗೇಟ್ ಬಳಿ ಅಪಘಾತ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ರಸ್ತೆ ವಿಭಜಕ ಅಳವಡಿಸಿ ಬ್ಯಾರಿಕೇಡ್ ಇಟ್ಟಿದ್ದಾರೆ ಎಂದರು.

ಸ್ಥಳೀಯ ನಿವಾಸಿಗರನ್ನು ಬಯಲು ಬಂದಿಖಾನೆಯನ್ನಾಗಿ ಮಾಡಲಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮತ್ತೆ ಅಂಡರ್ ಪಾಸ್ ನಿರ್ಮಾಣ ಮಾಡಿದರೆ ಹೇಗೆ. ಅಂಡರ್ ಪಾಸ್ ರಸ್ತೆ ಬೇಡ, ಈಗಾಗಲೇ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವುದರಿಂದ ಪ್ಲೈಓವರ್ ರಸ್ತೆ ಬೇಕು. ಯಾವುದೆ ಕಾರಣಕ್ಕೆ ಅಂಡರ್ ಪಾಸ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ಐವಿಸಿ ರಸ್ತೆ ಉಗನವಾಡಿ ಕಡೆಯಿಂದ 800 ರಿಂದ 900 ಸರಕು ಸಾಗಾಣಿಕೆ ವಾಹನಗಳು ಸಂಚರಿಸುತ್ತವೆ. ಕೆಲವು ಸರಕು ಸಾಗಾಣಿಕೆ ವಾಹನಗಳನ್ನು ಬೆಂಗಳೂರು ನಗರಕ್ಕೆ ಕಡಿವಾಣ ಹಾಕಿರುವುದರಿಂದ ದಾಬಸ್‌ಪೇಟೆ, ದೊಡ್ಡಬಳ್ಳಾಪುರ ಮಾರ್ಗವಾಗಿ ಅರದೇಶನಹಳ್ಳಿ ಉಗನವಾಡಿ, ಐವಿಸಿ ರಸ್ತೆ ಮೂಲಕ ದೇವನಹಳ್ಳಿ ತಲುಪಿ ನಂತರ ಕೆ.ಆರ್. ಪುರ ವೈಟ್ ಫೀಲ್ಡ್‌ಗೆ ಸಂಚರಿಸುತ್ತವೆ ಎಂದರು.

‘ಆನೆ ಸಂಚರಿಸುವ ಮಾರ್ಗದಲ್ಲಿ ಇಲಿ ಬಿಲ ತೋಡಿದಂತೆ’ ಅಂಡರ್ ಪಾಸ್ ರಸ್ತೆ ನಿರ್ಮಿಸಿದರೆ ಯಾರಿಗೆ ಪ್ರಯೋಜನ. ರೈಲ್ವೆ ಅಧಿಕಾರಿಗಳು ಇದರ ಬಗ್ಗೆ ಎಚ್ಚರಿಕೆ ವಹಿಸಿ ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಅನಿರ್ವಾಯವಾಗಲಿದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.