ADVERTISEMENT

ದೇವನಹಳ್ಳಿ: ಸ್ಟರ್ಲಿಂಗ್ ಶಾಲೆಯಲ್ಲಿ ಉಚಿತ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 4:02 IST
Last Updated 15 ಜುಲೈ 2021, 4:02 IST
ದೇವನಹಳ್ಳಿ ಪಟ್ಟಣದ ಸ್ಟರ್ಲಿಂಗ್ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಚಿತ ಶಿಕ್ಷಣ ಕುರಿತು ಕರಪತ್ರ ಬಿಡುಗಡೆ ಮಾಡಲಾಯಿತು
ದೇವನಹಳ್ಳಿ ಪಟ್ಟಣದ ಸ್ಟರ್ಲಿಂಗ್ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಚಿತ ಶಿಕ್ಷಣ ಕುರಿತು ಕರಪತ್ರ ಬಿಡುಗಡೆ ಮಾಡಲಾಯಿತು   

ದೇವನಹಳ್ಳಿ:ಕೊರೊನಾ ಸಂಕಷ್ಟದ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಶಿಶುವಿಹಾರ, ಎಲ್.ಕೆ.ಜಿ, ಯುಕೆಜಿ, 1ನೇ ತರಗತಿ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಉಚಿತವಾಗಿ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ ಎಂದು ಸ್ಟರ್ಲಿಂಗ್ ಶಾಲೆ ಮುಖ್ಯಸ್ಥ ಸಿದ್ದೇಶ್ವರ್ ಹೇಳಿದರು.

ಪಟ್ಟಣದ ಸ್ಟರ್ಲಿಂಗ್ ಶಾಲೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರವೇ ದೇಶ ಪ್ರಗತಿಯಾಗಲು ಸಾಧ್ಯ. ಎರಡು ಶೈಕ್ಷಣಿಕ ಅವಧಿಗಳಲ್ಲಿ ಕಾಡಿದ ಕೊರೊನಾದಿಂದಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದರು.

ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಕುಗ್ಗುತ್ತಿದೆ. ನಾಗರಿಕರು ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಕಾರಣದಿಂದ ಈ ವರ್ಷದಲ್ಲಿ ಉಚಿತವಾಗಿ ಶಿಕ್ಷಣ ನೀಡಲು ನಿರ್ಧರಿಸಿದ್ದೇವೆ. ಪ್ರಸ್ತುತ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಸರ್ಕಾರ ಆಫ್‌ಲೈನ್ ತರಗತಿಗಳು ನಡೆಸಲಿಕ್ಕೆ ಅನುಮತಿ ನೀಡಿದರೆ ಶಾಲೆಯಲ್ಲೇ ಉಚಿತವಾಗಿ ಪಠ್ಯಪುಸ್ತಕ ವಿತರಿಸಿ ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದರು.

ADVERTISEMENT

ಪುರಸಭಾ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ಶಾಲೆಗಳು ಆರಂಭ ಮಾಡುವುದು ಸುಲಭ. ಆದರೆ, ಅದನ್ನು ನಿರ್ವಹಣೆ ಮಾಡುವುದು ಈಗಿನ ಪರಿಸ್ಥಿತಿಯಲ್ಲಿ ತುಂಬಾ ಕಷ್ಟಕರ ಎಂದರು.

ಮುಖ್ಯಶಿಕ್ಷಕ ಮುನೇಗೌಡ ಮಾತನಾಡಿ, ಪೋಷಕರಿಗೆ ಹೊರೆಯಾಗದಂತೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗದಂತೆ ಮಾಡಲು ಅನೇಕ ಶಿಕ್ಷಣ ಸಂಸ್ಥೆಗಳು ಶೇ 30ರಷ್ಟು ರಿಯಾಯಿತಿ ನೀಡಿವೆ. ನಮ್ಮ ಸಂಸ್ಥೆಯಿಂದ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಮುಖ್ಯಸ್ಥೆ ರಂಜಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.