ADVERTISEMENT

ವಲಸೆ ಕಾರ್ಮಿಕರಿಗೆ ಉಚಿತ ಪಡಿತರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 15:57 IST
Last Updated 3 ಜೂನ್ 2020, 15:57 IST

ದೇವನಹಳ್ಳಿ: ‘ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಅಭಿಯಾನ್ ಯೋಜನೆಯಡಿ, ಷರತ್ತುಬದ್ಧವಾಗಿ ಉಚಿತ ಪಡಿತರವನ್ನು ಜಿಲ್ಲೆಯ ವಲಸಿಗ ಕಾರ್ಮಿಕರಿಗೆ ವಿತರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಲಸೆ ಕಾರ್ಮಿಕ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಹಾಗೂ ಕಡಲೆಕಾಳು ನೀಡಲಾಗುವುದು. ಈಗಾಗಲೇ ಮೇ ತಿಂಗಳಲ್ಲಿ ಉಚಿತ ಪಡಿತರ ವಿತರಿಸಲಾಗಿದ್ದು ಜೂನ್ ತಿಂಗಳಲ್ಲಿ ಉಚಿತ ಪಡಿತರ ವಿತರಿಸಲು ಕ್ರಮ ವಹಿಸಲಾಗಿದೆ. ಮೇಯಲ್ಲಿ ಉಚಿತ ಪಡಿತರ ಪಡೆಯದಿರುವವರು ಜೂನ್‌ನಲ್ಲೂ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜೂನ್ 10ರ ವರೆಗೆ ಉಚಿತ ಪಡಿತರ ವಿತರಣೆಯಾಗಲಿದೆ.

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹಾಗೂ ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಜೀವನ ನಿರ್ವಹಣೆಗಾಗಿ ಹೋಗಿರುವವರನ್ನು ವಲಸೆ ಕಾರ್ಮಿಕರು ಎಂಬುದಾಗಿ ಪರಿಗಣಿಸಲಾಗಿದೆ. ಅವರು ಹಾಲಿ ನೆಲೆಸಿರುವ ಸ್ಥಳದಲ್ಲಿ ಸ್ವಂತ ಮನೆ ಹೊಂದಿರಬಾರದು ಹಾಗೂ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು. ಫಲಾನುಭವಿಯು ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದುಕೊಂಡಲ್ಲಿ, ದಂಡ ಅಥವಾ ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.