ADVERTISEMENT

ಟೋಲ್‌ನಲ್ಲಿ ಸ್ಥಳೀಯರಿಗೆ ಸರ್ವಿಸ್‌ ರಸ್ತೆ ಕೊಡಿ

ರೈತರೊಂದಿಗೆ ನಿಲ್ಲಬೇಕಾದ ಜನಪ್ರತಿನಿಧಿಗಳ ಮೌನದ ಆರೋಪ, ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 14:25 IST
Last Updated 29 ಅಕ್ಟೋಬರ್ 2018, 14:25 IST
ದೇವನಹಳ್ಳಿಯ ಟೋಲ್ ದ್ವಾರ
ದೇವನಹಳ್ಳಿಯ ಟೋಲ್ ದ್ವಾರ   

ವಿಜಯಪುರ: ದೇವನಹಳ್ಳಿಯ ಟೋಲ್‌ನಲ್ಲಿ ಸ್ಥಳೀಯರಿಗೆ ಅನುಕೂಲವಾಗುವಂತೆ ಸರ್ವಿಸ್ ರಸ್ತೆಯನ್ನು ನಿರ್ಮಾಣ ಮಾಡಿಕೊಡುವುದರ ಬದಲಾಗಿ ಸ್ಥಳೀಯರಿಂದ ಹಣ ವಸೂಲಿ ಮಾಡಲಾಗುತ್ತಿದೆ. ರೈತರ ಪರವಾಗಿ ನಿಲ್ಲಬೇಕಾಗಿರುವ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ ಎಂದು ವಿಜಯಪುರ ನಿವಾಸಿ ಎಸ್. ಮಂಜುನಾಥ್ ಆರೋಪಿಸಿದರು.

ಸೋಮವಾರ ಮಾತನಾಡಿದ ಅವರು, 20 ಕಿಮೀ ವ್ಯಾಪ್ತಿಯಲ್ಲಿ ಸ್ಥಳೀಯರು ಓಡಾಡಲಿಕ್ಕೆ ಸರ್ವಿಸ್ ರಸ್ತೆಯನ್ನು ಕೊಡಬೇಕು. ರಸ್ತೆಯನ್ನು ಕೊಡದೆ ತಿಂಗಳಿಗೆ ₹ 255 ವಸೂಲಿ ಮಾಡಿಕೊಂಡು ಪಾಸ್ ನೀಡಿದ್ದಾರೆ. ಅದನ್ನು ತಿಂಗಳಿಗೊಮ್ಮೆ ನವೀಕರಣ ಮಾಡುವಂತೆ ಒತ್ತಾಯ ಮಾಡುತ್ತಿದ್ದು ಆಗದಿದ್ದಲ್ಲಿ ಟೋಲ್ ಹಣ ಕಟ್ಟಿ ಹೋಗುವಂತೆ ಒತ್ತಾಯಿಸಿದ್ದಾರೆ ಎಂದರು.

‘ಟೋಲ್ ಮಾಡುವಾಗಲೇ ಸರ್ವಿಸ್ ರಸ್ತೆಯನ್ನು ನಿರ್ಮಿಸಬೇಕಾಗಿತ್ತು. ಈ ಬಗ್ಗೆ ಅನೇಕ ಸಂಘಟನೆಗಳು, ಸ್ಥಳೀಯರು ಹೋರಾಟ ಮಾಡಿದ್ದೇವೆ. ಹೋರಾಟದ ಸಮಯದಲ್ಲಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಸ್ಥಳೀಯರಿಗೆ ಟೋಲ್ ರಹಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದ ಸಿಬ್ಬಂದಿ ಇದುವರೆಗೂ ಅವಕಾಶ ಮಾಡಿಕೊಟ್ಟಿಲ್ಲ’ ಎಂದರು.

ADVERTISEMENT

ಹೀಗಾಗಿ ತಾಲ್ಲೂಕಿನ ಎಲ್ಲ ನಾಗರಿಕರಿಗೂ ಟೋಲ್ ರಹಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ನಿವಾಸಿ ಕೃಷ್ಣಮೂರ್ತಿ ಮಾತನಾಡಿ, ‘ನಾವು ಬಸ್ಸುಗಳಲ್ಲಿ ಪ್ರಯಾಣ ಮಾಡಬೇಕಾದರೂ ಪ್ರತ್ಯೇಕವಾಗಿ ಟೋಲ್ ಕಟ್ಟಲು ಹಣ ಕೊಡಬೇಕು. ಒಬ್ಬ ಪ್ರಯಾಣಿಕ ಬಿಎಂಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಹೋಗಿ ಬರಬೇಕಾದರೆ ಟೋಲ್‌ಗೆ ಸಂಬಂಧಿಸಿ ₹ 12 ವಸೂಲಿ ಮಾಡಲಾಗುತ್ತಿದೆ. ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲೂ ವಸೂಲಿ ಮಾಡುತ್ತಿದ್ದಾರೆ. ಇದು ಯಾವ ನ್ಯಾಯ. ಕೆಲವು ಸಂಘಟನೆಗಳು ರಾಜ್ಯ ಮಟ್ಟದ ನಾಯಕರು, ಕೆಲವರಿಗೆ ಉಚಿತವಾಗಿ ಬಿಟ್ಟು ಕಳುಹಿಸುತ್ತಾರೆ. ಸ್ಥಳೀಯರಿಗಾದರೆ ಟೋಲ್ ಕಟ್ಟಬೇಕು’ ಎಂದು ಆಕ್ಷೇಪಿಸಿದರು.

ರೈತ ಸೂರ್ಯನಾರಾಯಣಪ್ಪ ಮಾತನಾಡಿ, ‘ನಾವು ಸ್ಥಳೀಯರು. ನಾವೇನು ಪದೇ ಪದೇ ಬೆಂಗಳೂರಿಗೆ ಹೋಗಲು ಆಗುವುದಿಲ್ಲ. ಏನಾದರೂ ಅನಿವಾರ್ಯತೆ ಇದ್ದಾಗ, ಆಸ್ಪತ್ರೆಗಳಿಗಳಿಗೆ ಹೋಗಬೇಕಾದರೆ ಹೋಗ್ತೇವೆ. ಬೆಳೆದ ತರಕಾರಿಯನ್ನು ಬೆಂಗಳೂರಿನ ಮಾರುಕಟ್ಟೆಗೆ ಹಾಕಿ ಬರಬೇಕಾದರೆ ನಮ್ಮ ಕಾರಿನಲ್ಲೇ ತುಂಬಿಕೊಂಡು ಹೋಗುತ್ತೇವೆ. ನಾವು ಪಾಸ್ ತಗೊಂಡಿಲ್ಲ. ಟೋಲ್ ಬಳಿ ಹೋದಾಗ ನಾವು ಸ್ಥಳೀಯರು ಎಂದು ತಿಳಿಸಿದರೂ, ಹಾಗಾದರೆ ಪಾಸ್ ಕೊಡಿ ಇಲ್ಲವೇ ಟೋಲ್ ಹಣ ಕಟ್ಟಿ ಎಂದು ಅವರು ಒತ್ತಾಯಿಸುತ್ತಾರೆ’ ಎಂದು ಟೀಕಿಸಿದರು.

‘ಬೆಳೆದ ಬೆಳೆಗಳಿಗೆ ಬೆಲೆಯಿಲ್ಲದೆ ಕಂಗಾಲಾಗಿರುವ ನಾವು ಟೋಲ್‌ಗಾಗಿ ₹ 300 ಹಣ ಕಟ್ಟಿ ಹೋಗಬೇಕು. ಜನರು ಮಾಡುವ ಹೋರಾಟಕ್ಕೆ ಬೆಲೆಯಿಲ್ಲವೇ’ ಎಂದು ಕೇಳಿದರು.

‘ನಾವು ಬದುಕುತ್ತಿದ್ದ ಭೂಮಿಗಳನ್ನು ರಸ್ತೆಗಳಿಗಾಗಿ, ಏರ್ ಪೋರ್ಟ್ ಮಾಡಲಿಕ್ಕಾಗಿ ಬಿಟ್ಟು ಕೊಟ್ಟರೆ ಸರ್ಕಾರದವರು ಹಣಕ್ಕಾಗಿ ಖಾಸಗಿಯವರಿಗೆ ಬಿಟ್ಟುಕೊಟ್ಟು ಟೋಲ್ ರೂಪದಲ್ಲಿ ದಂದೆ ನಡೆಸುತ್ತಿದ್ದಾರೆಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.