ಹೊಸಕೋಟೆ: ನಗರದ ಕೋಟೆಯಲ್ಲಿರುವ ಖಿಲ್ಲೆ ಆಂಜನೇಯ ದೇವಾಲಯದಲ್ಲಿ ಸೋಮವಾರ ಹನುಮ ಜಯಂತಿ ಕಾರ್ಯಕ್ರಮ ನಡೆಯಿತು.
ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್. ಬಚ್ಚೇಗೌಡ ಮಾತನಾಡಿ, ‘ನಗರದ ವ್ಯಾಪ್ತಿಯಲ್ಲಿ ನೂರಾರು ದೇವಾಲಯಗಳಿವೆ. ಈ ಪೈಕಿ ಕೆಲವು ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿವೆ. ಅವುಗಳ ಜೀರ್ಣೋದ್ಧಾರ ಮಾಡಿ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ’ ಎಂದರು.
ಕೋಟೆಯ ಖಿಲ್ಲೆ ಆಂಜನೇಯ ದೇವಾಲಯವು 350 ವರ್ಷಗಳ ಹಿಂದೆ ಚೋಳರು ನಿರ್ಮಾಣ ಮಾಡಿರುವುದಾಗಿ ಇತಿಹಾಸ ಹೇಳುತ್ತದೆ. 20 ವರ್ಷಗಳ ಹಿಂದೆ ಸ್ಥಳೀಯ ಯುವಕರು ಮರಿಯಪ್ಪ ಅವರ ನೇತೃತ್ವದಲ್ಲಿ ದೇವಾಲಯವನ್ನು ಅಭಿವೃದ್ಧಿಗೊಳಿಸಿ ಪ್ರತಿನಿತ್ಯ ಪೂಜೆ ನಡೆಯುವಂತೆ ಮಾಡಿದ್ದಾರೆ ಎಂದು ಸ್ಮರಿಸಿದರು.
ಹಿಂದೂಗಳಿಗೆ ದೇವಾಲಯಗಳು ಶ್ರದ್ಧಾ ಕೇಂದ್ರಗಳಾಗಿವೆ. ಇತ್ತೀಚೆಗೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ. ದೇವರ ಬಗ್ಗೆ ನಂಬಿಕೆ, ಶ್ರದ್ಧೆ ಹೆಚ್ಚಾದರೆ ಸಮಾಜವೂ ಒಳ್ಳೆಯ ರೀತಿಯಲ್ಲಿ ಇರುತ್ತದೆ ಎಂದರು.
ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿದರು. ಪೂಜಾ ಕಾರ್ಯಕ್ರಮದಲ್ಲಿ ಮುಖಂಡರಾದ ಸಿ. ಬೈರೇಗೌಡ, ವಿಜಯ್ ಕುಮಾರ್, ಮಂಜುನಾಥ್, ಉದಯ್ ಅಯ್ಯರ್ ಸೇರಿದಂತೆ ಭಕ್ತರು ಭಾಗವಹಿಸಿದ್ದರು. ನಾಗರಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.