ADVERTISEMENT

ವಿಜಯಪುರ: ಹೊಸ ಮನೆ ಕನಸು ಭಗ್ನ, ತಾತ್ಕಾಲಿಕ ಶೆಡ್‌ ಆಸರೆ

ಸಹಾಯಧನ ಬಿಡುಗಡೆ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಸ್ಪಂದಿಸುವುದೇ ಪಂಚಾಯಿತಿ ?

ಎಂ.ಮುನಿನಾರಾಯಣ
Published 8 ಡಿಸೆಂಬರ್ 2023, 5:42 IST
Last Updated 8 ಡಿಸೆಂಬರ್ 2023, 5:42 IST
ವಿಜಯಪುರ ಹೋಬಳಿ ಬಿಜ್ಜವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿ ಪದ್ಮಮ್ಮ ಅವರ ಕುಟುಂಬ ವಾಸವಾಗಿರುವ ಶೆಡ್
ವಿಜಯಪುರ ಹೋಬಳಿ ಬಿಜ್ಜವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿ ಪದ್ಮಮ್ಮ ಅವರ ಕುಟುಂಬ ವಾಸವಾಗಿರುವ ಶೆಡ್   

ವಿಜಯಪುರ(ದೇವನಹಳ್ಳಿ): ಸರ್ಕಾರದಿಂದ ಸಹಾಯಧನ ಬಿಡುಗಡೆ ನಿರೀಕ್ಷೆಯಲ್ಲಿದ್ದ ಕುಟುಂಬವೊಂದರ ಹೊಸ ಮನೆ ಕನಸು ಭಗ್ನಗೊಂಡಿದೆ. ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗದ ಕಾರಣ ಒಂದು ವರ್ಷದಿಂದ ತಾತ್ಕಾಲಿಕ ಶೆಡ್‌ನಲ್ಲಿ ವಾಸ ಮಾಡುವಂತಾಗಿದೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ ಹೊಲೇರಹಳ್ಳಿ ಗ್ರಾಮದ ಪದ್ಮಮ್ಮ ಅವರು, ಪಿಎಂಎಜಿವೈ ಯೋಜನೆ ಫಲಾನುಭವಿಯಾಗಿ ಆಯ್ಕೆಯಾಗಿದ್ದರು. ಆಯ್ಕೆ ಪಟ್ಟಿಯನ್ನು ಪಂಚಾಯಿತಿಯಲ್ಲಿ ಅನುಮೋದನೆ ಮಾಡಿ, ತಾಲ್ಲೂಕು ಪಂಚಾಯಿತಿಗೂ ಕಳುಹಿಸಿ ವರ್ಷ ಕಳೆದರೂ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ.

‘ಒಂದು ವರ್ಷದಿಂದ ತಾತ್ಕಾಲಿಕ ಶೆಡ್‌ನಲ್ಲಿ ನಾಲ್ಕು ಮಂದಿ ವಾಸವಾಗಿದ್ದೇವೆ. ಮಳೆ, ಗಾಳಿ ಬಂದರೆ ಬದುಕು ಕಷ್ಟವಾಗುತ್ತದೆ. ಮಳೆ ನೀರು ಶೆಡ್‌ಗೆ ನುಗ್ಗುತ್ತದೆ. ಈಗ ಚಳಿಗಾಲ ಆರಂಭವಾಗಿದೆ. ಶೀಟ್‌ಗಳಲ್ಲೇ ಗೋಡೆ ನಿರ್ಮಾಣ ಮಾಡಿಕೊಂಡು ಮೇಲೋದಿಕೆಗೂ ಶೀಟ್‌ಗಳು ಹಾಕಲಾಗಿದೆ. ಸಾಲ ಮಾಡಿ ಪಾಯ ಹಾಕಿದ್ದೇವೆ. ಪಂಚಾಯಿತಿ ಕಡೆಯಿಂದ ಯಾವುದೇ ಭರವಸೆ ಸಿಗುತ್ತಿಲ್ಲ’ ಎಂದು ಪದ್ಮಮ್ಮ ಅಳಲು ತೋಡಿಕೊಂಡರು.

ADVERTISEMENT

ತಾಲ್ಲೂಕು ಹೌಸಿಂಗ್ ನೋಡಲ್ ಅಧಿಕಾರಿ ಚಂದ್ರಪ್ಪ ಮಾತನಾಡಿ, ಪಿಎಂಎಜಿವೈ ಯೋಜನೆಯಡಿ ತಾಲ್ಲೂಕಿನಲ್ಲಿ 280 ಮನೆಗಳು ಆಯ್ಕೆಯಾಗಿವೆ. ಎಲ್ಲ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. 47 ಮನೆಗಳು ಪಾಯ ಹಂತದಲ್ಲಿದೆ. 25 ಮನೆಗಳು ಗೋಡೆ ಹಂತದಲ್ಲಿವೆ. 33 ಮನೆಗಳು ಮೋಲ್ಡ್ ಆಗಿವೆ. ಪದ್ಮಮ್ಮ ಎಂಬ ಫಲಾನುಭವಿ ಯೋಜನೆಗೆ ಆಯ್ಕೆ ಆಗಿಲ್ಲ. ನೆಲದ ಮಟ್ಟದಲ್ಲಿ ಜಿಪಿಎಸ್ ಮಾಡಬೇಕಾಗಿತ್ತು. ಪಂಚಾಯಿತಿಯವರು ಮಾಡಿಲ್ಲದ ಕಾರಣ ಆಯ್ಕೆಯಾಗಿಲ್ಲ. ಈ ವರ್ಷದಲ್ಲಿ ನೀಡುವ ಗುರಿಯಲ್ಲಿ ಸೇರಿಸಿ, ಜಿಪಿಎಸ್ ಮಾಡಿದರೆ ಆಯ್ಕೆಯಾಗುತ್ತಾರೆ ಎಂದರು.

ಬಿಜ್ಜವರ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಪಿಎಂಎಜಿವೈ ಯೋಜನೆಯಡಿ ಪದ್ಮಮ್ಮ ಅವರನ್ನು ಆಯ್ಕೆ ಮಾಡಿ, ಫಲಾನುಭವಿಗಳ ಪಟ್ಟಿ ಅನುಮೋದನೆಗೆ ಆಗಸ್ಟ್ ತಿಂಗಳಿನಲ್ಲಿ ತಾಲ್ಲೂಕು ಪಂಚಾಯಿತಿಗೆ ಕಳುಹಿಸಲಾಗಿದೆ. ಇದುವರೆಗೂ ಅನುಮೋದನೆ ಆಗಿಲ್ಲ. ಅನುಮೋದನೆಯಾಗಿ ಬಂದ ನಂತರ ಜಿ.ಪಿ.ಎಸ್ ಮಾಡಲಾಗುವುದು ಎಂದರು.

ಚೈತ್ರಾ ಚಂದ್ರಶೇಖರ್ ಎಂಬುವವರಿಗೆ ಸೇರಿದ ಕುಸಿದು ಬಿದ್ದಿರುವ ಮನೆ
ಮೇಲ್ಛಾವಣಿ ಕುಸಿದು ಬೀಳದಂತೆ ಮರಗಳನ್ನು ರಕ್ಷಣೆಗೆ ನಿಲ್ಲಿಸಿರುವುದು

ಗೋಡೆ ಕುಸಿದರೂ ಪರಿಹಾರ ಇಲ್ಲ

ಗೃಹಿಣಿ ಚೈತ್ರಾ ಚಂದ್ರಶೇಖರ್ ಮಾತನಾಡಿ ’ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಜಾಸ್ತಿಯಾಗಿದ್ದಾಗ ನಾವು ವಾಸವಾಗಿದ್ದ ಮನೆ ಒಂದು ಗೋಡೆ ಕುಸಿದು ಬಿದ್ದಿದೆ. ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಮನೆ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಬಿದ್ದು ಹೋಗಿರುವ ಮನೆಯಲ್ಲೇ ವಾಸ ಇದ್ದೇವೆ. ಇರುವ ಮನೆ ಮೇಲ್ಛಾವಣಿ ಯಾವಾಗ ಕುಸಿದು ಬೀಳುತ್ತದೋ ಅನ್ನುವ ಭಯದಲ್ಲಿ ಜೀವನ ಮಾಡುತ್ತಿದ್ದೇವೆ. ಪಂಚಾಯಿತಿಗೆ ಅರ್ಜಿ ನೀಡಲಾಗಿದೆ. ಏನು ಪ್ರಯೋಜನವಾಗಿಲ್ಲ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.