ADVERTISEMENT

ದೇವನಹಳ್ಳಿ: ಸರ್ಕಾರಿ ಜಮೀನು ಒತ್ತುವರಿ; ಕಠಿಣ ಕ್ರಮ

ದೇವನಹಳ್ಳಿಯಲ್ಲಿ ರಾಜಕಾಲುವೆ ಮುಚ್ಚಿ ರಸ್ತೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 2:37 IST
Last Updated 10 ಆಗಸ್ಟ್ 2021, 2:37 IST
ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿ ರಾಜಕಾಲುವೆ ಮೇಲೆ ರಸ್ತೆ ಮಾಡಿರುವುದನ್ನು ತೆರವುಗೊಳಿಸಿದರು
ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿ ರಾಜಕಾಲುವೆ ಮೇಲೆ ರಸ್ತೆ ಮಾಡಿರುವುದನ್ನು ತೆರವುಗೊಳಿಸಿದರು   

ದೇವನಹಳ್ಳಿ: ‘ರಾಜಕಾಲುವೆ ಸೇರಿದಂತೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹೇಳಿದರು.

ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ರಾಜಕಾಲುವೆ ಮುಚ್ಚಿ ಖಾಸಗಿ ಅಪಾರ್ಟ್‌ಮೆಂಟ್‌ನಿಂದ ರಸ್ತೆ ನಿರ್ಮಿಸಿರುವ ಜಾಗವನ್ನು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಕಂದಾಯ ಅಧಿಕಾರಿಗಳು ತೆರವುಗೊಳಿಸಿದರು.

ಸೂಲಿಬೆಲೆ ರಸ್ತೆಯ ಸರ್ವೆ ನಂ. 301, 302, 340, 342ನಲ್ಲಿ ರಾಜಕಾಲುವೆ ಜಾಗವನ್ನು ಮುಚ್ಚಿ ಸುಮಾರು 40 ಅಡಿ ಅಗಲ ಇರುವ 2 ಕಿಲೋಮೀಟರ್ ಉದ್ದದಷ್ಟು ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತೆರವುಗೊಳಿಸಲಾಯಿತು.

ADVERTISEMENT

ಮಳೆಗಾಲದ ಸಂದರ್ಭದಲ್ಲಿ ಮಳೆನೀರು ಸರಾಗವಾಗಿ ಹರಿಯಲು ರಾಜಕಾಲುವೆಗಳು ಉಪಯುಕ್ತವಾಗಿವೆ. ಜಿಲ್ಲೆಯಲ್ಲಿ ಯಾರೇ ರಾಜಕಾಲುವೆ ಮತ್ತು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾರೇ ದೊಡ್ಡ ವ್ಯಕ್ತಿ ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಜಿಲ್ಲೆಯಲ್ಲಿ ಬಡಾವಣೆ ನಿರ್ಮಾಣಕ್ಕೆ ಸರ್ಕಾರಿ ಜಾಗ ಒತ್ತುವರಿಯಾಗಿದ್ದರೆ ಹಾಗೂ ಅನಧಿಕೃತವಾಗಿ ಬಡಾವಣೆ ನಿರ್ಮಿಸಿದ್ದರೆ ದೂರು ಬಂದ ತಕ್ಷಣ ಅಧಿಕಾರಿಗಳ ತಂಡ ತೆರವುಗೊಳಿಸುವ ಕಾರ್ಯ ಮಾಡಲಿದೆ. ಖಾಸಗಿ ಅಪಾರ್ಟ್‌ಮೆಂಟ್‌ನವರು ರಾಜಕಾಲುವೆ ಮೇಲೆ ರಸ್ತೆ ನಿರ್ಮಿಸಿದ್ದರು. ಸಾರ್ವಜನಿಕರಿಂದ ದೂರು ಬಂದ ತಕ್ಷಣ ಅಧಿಕಾರಿಗಳ ತಂಡ ಕಳುಹಿಸಿ ಒತ್ತುವರಿ ತೆರವುಗೊಳಿಸಿ ಕಾಲುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಭೂ ದಾಖಲೆಗಳ ಉಪ ನಿರ್ದೇಶಕ ಮಂಜುನಾಥ್, ತಾಲ್ಲೂಕು ಸರ್ವೆ ಅಧಿಕಾರಿ ಗಿರೀಶ್ ನಾಯಕ್, ರಾಜಸ್ವ ನಿರೀಕ್ಷಕ ವಿಶ್ವನಾಥ್, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.