ADVERTISEMENT

ಬಾಡಿಗೆ ಕಟ್ಟಡದಲ್ಲಿ ಸರ್ಕಾರಿ ಕಚೇರಿಗಳು!

ಅವ್ಯವಸ್ಥೆ ಆಗರವಾದ ಇಲಾಖೆಗಳು, ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 16:12 IST
Last Updated 28 ಏಪ್ರಿಲ್ 2025, 16:12 IST
ಆನೇಕಲ್‌ ತಾಲ್ಲೂಕಿನ ಚಂದಾಪುರ ಆನೇಕಲ್‌ ಯೋಜನಾ ಪ್ರಾಧಿಕಾರದ ಕಚೇರಿ
ಆನೇಕಲ್‌ ತಾಲ್ಲೂಕಿನ ಚಂದಾಪುರ ಆನೇಕಲ್‌ ಯೋಜನಾ ಪ್ರಾಧಿಕಾರದ ಕಚೇರಿ   

ಆನೇಕಲ್: ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿವೆ. ಆದರೆ, ವ್ಯವಸ್ಥಿತ ಸೌಲಭ್ಯಗಳಿಂದ ವಂಚಿತವಾಗಿವೆ. ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಮತ್ತು ಮಿನಿ ವಿಧಾನಸೌಧ ನಿರ್ಮಿಸಬೇಕೆಂಬುದು ಈ ಭಾಗದ ಜನರ ಬಹುದಿನಗಳ ಒತ್ತಾಯವಾಗಿದೆ.

ಅತಿಹೆಚ್ಚು ಆದಾಯ ಹೊಂದಿರುವ ಆನೇಕಲ್ ಯೋಜನಾ ಪ್ರಾಧಿಕಾರ, ಆನೇಕಲ್, ಅತ್ತಿಬೆಲೆ, ಮತ್ತು ಬನ್ನೇರುಘಟ್ಟ ಉಪ ನೋಂಣಾಧಿಕಾರಿ ಕಚೇರಿಯು ಬಾಡಿಗೆ ಕಟ್ಟಡದಲ್ಲಿದೆ. ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಿ ಕೊಡುವ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಸೂರಿಲ್ಲದೆ ಬಾಡಿಗೆ ಕಟ್ಟಡದಲ್ಲಿವೆ. ಇದರಿಂದಾಗಿ ಪ್ರತಿವರ್ಷ ಲಕ್ಷಾಂತರ ಬಾಡಿಗೆಗೆ ಪಾವತಿ ಮಾಡಬೇಕಿದೆ. ಆದರೆ, ಸ್ವಂತ ಕಟ್ಟಡ ಹೊಂದುವುದು ಮರೀಚಿಕೆಯಾಗಿಯೇ ಉಳಿದಿದೆ.

ಆನೇಕಲ್ ಯೋಜನಾ ಪ್ರಾಧಿಕಾರದ ಕಚೇರಿಯು ತಾಲ್ಲೂಕಿನ ಹೃದಯ ಭಾಗ ಚಂದಾಪುರದಲ್ಲಿದೆ. ಎಲ್ಲರಿಗೂ ನಿವೇಶನ ನೀಡುವ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಅನುಮತಿ ನೀಡುವ ಆನೇಕಲ್ ಯೋಜನಾ ಪ್ರಾಧಿಕಾರಕ್ಕೆ ಸ್ವಂತ ಕಟ್ಟಡವಿಲ್ಲದಿರುವುದು ಶೋಚನೀಯ ಸ್ಥಿತಿ ಎನ್ನುತ್ತಾರೆ ಸಾರ್ವಜನಿಕರು.

ADVERTISEMENT

ಸಾರ್ವಜನಿಕ ಉದ್ದೇಶಕ್ಕಾಗಿ ಸಿಎಸ್ ನೀಡುವ ಅಧಿಕಾರ ಯೋಜನೆ ಪ್ರಾಧಿಕಾರಕ್ಕೆ ಇದೆ. ಆದರೆ, ಯೋಜನಾ ಪ್ರಾಧಿಕಾರಕ್ಕೆ ಸ್ವಂತ ಸೂರು ಇಲ್ಲದಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಚಂದಾಪುರ ಸಮೀಪದ ಇಗಲೂರು ಗ್ರಾಮದಲ್ಲಿ ಯೋಜನಾ ಪ್ರಾಧಿಕಾರದ ಕಚೇರಿ ಕಟ್ಟಡ ಕಾಮಗಾರಿಯು ಪ್ರಗತಿಯಲ್ಲಿದ್ದು ಶೀಘ್ರ ಉದ್ಘಾಟಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಆನೇಕಲ್ ಮುರುಳಿ ಒತ್ತಾಯಿಸಿದರು.

ಆನೇಕಲ್‌ನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಲ್ಯಾಣ ಮಂಟಪ ಒಂದನ್ನು ಬಾಡಿಗೆಗೆ ಪಡೆದು ಕಾರ್ಯನಿರ್ವಹಿಸುತ್ತಿದೆ. ಆರ್‌ಟಿಒ ಕಚೇರಿಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿ ಸ್ವಂತ ಕಟ್ಟಡ ಹೊಂದುವಂತೆ ಮಾಡಬೇಕು ಎಂಬುದು ಸ್ಥಳೀಯರ ಬೇಡಿಕೆ. ಆರ್‌ಟಿಒ ಕಚೇರಿಯಲ್ಲಿ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಬಾಡಿಗೆಗಾಗಿ ಮಾಸಿಕವಾಗಿ ₹1.25ಲಕ್ಷ ಬಾಡಿಗೆ ಖರ್ಚು ಮಾಡುತ್ತಿದೆ. ಸರ್ಕಾರಿ ಜಾಗ ಒಂದನ್ನು ಗುರುತಿಸಿ ಸುಸಜ್ಜಿತ ಆರ್‌ಟಿಒ ಕಚೇರಿ ನಿರ್ಮಿಸುವುದರಿಂದ ವಾರ್ಷಿಕ ₹15ಲಕ್ಷಕ್ಕೂ ಹೆಚ್ಚು ಹಣ ಉಳಿಸಬಹುದಾಗಿದೆ ಎನ್ನುತ್ತಾರೆ ಚಂದಾಪುರದ ಮಾದೇಶ್.

ತಾಲ್ಲೂಕಿನ ಹೋಬಳಿಗೊಂದು ಉಪ ನೋಂದಣಾಧಿಕಾರಿಗಳ ಕಚೇರಿಗಳಿವೆ. ಆದರೆ, ಯಾವುದೇ ಕಚೇರಿಗಳಿಗೂ ಸಹ ಸ್ವಂತ ಕಟ್ಟಡವಿಲ್ಲ. ಪ್ರತಿದಿನ ಜಮೀನು ನಿವೇಶನ ಅಪಾರ್ಟ್‌ಮೆಂಟ್‌, ವಿಲ್ಲಾ ಸೇರಿದಂತೆ ವಿವಿಧ ನೋಂದಣಿಗಳಿಗಾಗಿ ಜನರು ಕಚೇರಿಗಳಿಗೆ ಬರುತ್ತಾರೆ. ಮಾಸಿಕವಾಗಿ ಲಕ್ಷಾಂತರ ಹಣ ಲಾಭವಾಗಿ ಸರ್ಕಾರಕ್ಕೆ ತಲುಪುತ್ತದೆ. ಆದರೆ, ಸ್ವಂತ ಕಟ್ಟಡವಿಲ್ಲದಿರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಸುಸಜ್ಜಿತ ಕಟ್ಟಡ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕು ಮತ್ತು ಸರ್ಕಾರಿ ಕಚೇರಿಗಳಿಗೆ ಜಾಗ ಮೀಸಲಿಡಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಪಟ್ಟಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ ಕಾರ್ಮಿಕ ಇಲಾಖೆ ಸೇರಿದಂತೆ ಹತ್ತಕ್ಕೂ ಹೆಚ್ಚು ಸರ್ಕಾರದ ವಿವಿಧ ಇಲಾಖೆಗಳು ಸ್ವಂತ ಸೂರಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮಿನಿವಿಧಾನಸೌಧಕ್ಕೆ ಒತ್ತಾಯ: ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಐದು ಎಕರೆ ವ್ಯಾಪ್ತಿಯಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಆಗ್ರಹಿಸಿದ್ದಾರೆ. 

ಆನೇಕಲ್‌ನ ಉಪನೋಂದಾಣಾಧಿಕಾರಿ ಕಚೇರಿ

ಸ್ವಂತ ಕಟ್ಟಡ ಪ್ರಯತ್ನ ಮಾಡಲಿ

‘ಸ್ವಂತ ಕಟ್ಟಡ ಹೊಂದುವ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು. ಈ ನಿಟ್ಟಿನಲ್ಲಿ ಇಲಾಖೆ ವ್ಯಾಪ್ತಿಯಲ್ಲಿನ ಕಾರ್ಯ ಬಗ್ಗೆ ತಾಲೂಕು ಆಡಳಿತಕ್ಕೆ ಗಮನಕ್ಕೆ ತಂದು ಸರ್ಕಾರಿ ಜಾಗ ಸದುಪಯೋಗಪಡಿಸಿಕೊಂಡು ಸ್ವಂತ ಕಟ್ಟಡ ಹೊಂದುವಂತಾಗಬೇಕು’ದೇವರಾಜು ಆನೇಕಲ್‌ ನಿವಾಸಿ ಮಿನಿ ವಿಧಾನಸೌಧಕ್ಕೆ ಪ್ರಸ್ತಾವ ‘ತಾಲ್ಲೂಕಿನಲ್ಲಿರುವ ಸರ್ಕಾರಿ ಕಚೇರಿಗಳ ಕಟ್ಟಡ ಸ್ವಂತ ಕಟ್ಟಡ ಹೊಂದುವಂತೆ ಮಾಡುವ ನಿಟ್ಟಿನಲ್ಲಿ ಸುಸಜ್ಜಿತ ಮಿನಿ ವಿಧಾನಸೌಧಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು. ಅಂಬೇಡ್ಕರ್‌ ಭವನದ ಸಮೀಪದ ಮೂರು ಎಕರೆ ಜಾಗವಿದ್ದು ಮುಂದಿನ ದಿನಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು’ಬಿ.ಶಿವಣ್ಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.