ADVERTISEMENT

‘ಸರ್ಕಾರ ದ್ರಾಕ್ಷಿ ಖರೀದಿಸಲಿ’

ದ್ರಾಕ್ಷಿ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು, ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಬೇಕು

ಎಂ.ಮುನಿನಾರಾಯಣ
Published 26 ಅಕ್ಟೋಬರ್ 2018, 13:34 IST
Last Updated 26 ಅಕ್ಟೋಬರ್ 2018, 13:34 IST
ದ್ರಾಕ್ಷಿ ಬೆಳೆ
ದ್ರಾಕ್ಷಿ ಬೆಳೆ   

ವಿಜಯಪುರ: ದ್ರಾಕ್ಷಿ ಬೆಳೆಗಾರರ ಪಾಲಿಗೆ ಇತ್ತೀಚೆಗೆ ಬೆಳಗಿನ ಜಾವದಲ್ಲಿ ಬೀಳುತ್ತಿರುವ ಮಂಜಿನ ಹನಿಗಳು ಕಂಟಕವಾಗಿ ಪರಿಣಮಿಸುತ್ತಿದೆ. ದಿನನಿತ್ಯ ಔಷಧಿ ಸಿಂಪಡಣೆ ಮಾಡಿಕೊಂಡು ಬೆಳೆ ಸಂರಕ್ಷಣೆ ಮಾಡಿಕೊಳ್ಳಬೇಕಾಗಿರುವ ಅನಿವಾರ್ಯತೆಗೆ ಒಳಗಾಗುತ್ತಿದ್ದಾರೆ.

ರೈತರು ಬೆಳೆದ ದ್ರಾಕ್ಷಿಯನ್ನು ಸರ್ಕಾರದವರೇ ಖರೀದಿ ಮಾಡಿ, ವೈನ್ ತಯಾರಿಕ ಘಟಕಗಳಿಗೆ ರವಾನೆ ಮಾಡುವ ಕೆಲಸವಾಗಬೇಕು. ರೈತರು ಗೂಡು ಬೆಳೆದರೆ ಕೆಎಸ್‌ಎಂಬಿ ಅವರು ಖರೀದಿ ಮಾಡುತ್ತಾರೆ. ರಾಗಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಖರೀದಿಸುತ್ತಾರೆ. ಅದೇ ಪ್ರಕಾರ ದ್ರಾಕ್ಷಿಯನ್ನೂ ಖರೀದಿ ಮಾಡಬೇಕು ಎಂದುರೈತರಾದ ಹನುಮಂತರಾಯಪ್ಪ ಹಾಗೂ ಸೋಮಣ್ಣ ಒತ್ತಾಯಿಸುತ್ತಾರೆ.

‘ಮಹಾರಾಷ್ಟ್ರದ ಸಾಂಗ್ಲಿ ಮುಂತಾದ ಕಡೆಗಳಿಂದ ತರಿಸಿಕೊಳ್ಳುವ ಉದ್ದೇಶದಿಂದ ಈ ಭಾಗದಲ್ಲಿನ ರೈತರು ಬೆಳೆಯುವ ದ್ರಾಕ್ಷಿಗೆ ರಾಸಾಯನಿಕ ಔಷಧಿಗಳನ್ನು ಹೆಚ್ಚು ಬಳಕೆ ಮಾಡುತ್ತಾರೆ ಎನ್ನುವ ನೆಪ ಹೇಳುತ್ತಾರೆ. ನಮ್ಮ ದ್ರಾಕ್ಷಿಯನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದ ನಂತರ ವರದಿಯಾಧರಿಸಿ ಸರ್ಕಾರ ಖರೀದಿ ಮಾಡಲಿ’ ಎಂದು ಅವರು ಹೇಳಿದ್ದಾರೆ.

ADVERTISEMENT

ಯುವ ರೈತ ಮುಖಂಡ ಮಂಜುನಾಥ್ ಮಾತನಾಡಿ, ‘ಈಗಿನ ಪರಿಸ್ಥಿತಿಯಲ್ಲಿ ದ್ರಾಕ್ಷಿ ಬೆಳೆಗಳನ್ನು ಕತ್ತರಿಸಿ ಬಿಸಾಡಿ, ಚಿಲ್ಲರೆ ಬೆಳೆಗಳನ್ನಾದರೂ ಇಡೋಣ ಎನಿಸುತ್ತಿದೆ. ಎಷ್ಟೇ ಕಷ್ಟಪಟ್ಟು ದುಡಿದರೂ ನಮ್ಮ ಕಷ್ಟಕ್ಕೆ ತಕ್ಕಷ್ಟು ಪ್ರತಿಫಲ ಸಿಗುತ್ತಿಲ್ಲ. ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಹೋದವರು, ಸಮಯಕ್ಕೆ ಸರಿಯಾಗಿ ಹಣ ಕೊಡಲ್ಲ. ನಾವು ಜೋರಾಗಿ ಮಾತನಾಡಲಿಕ್ಕೆ ನಮ್ಮ ಬಳಿಯಲ್ಲಿ ದ್ರಾಕ್ಷಿ ಕತ್ತರಿಸಿಕೊಂಡ ನಂತರ ಅವರು ಕೊಟ್ಟು ಹೋಗುವ ಒಂದು ಬಿಳಿ ಚೀಟಿ ಬಿಟ್ಟರೆ, ಬೇರೆ ದಾಖಲೆಗಳು ಇರುವುದಿಲ್ಲ. ಆದ್ದರಿಂದ ತೋಟಗಾರಿಕೆ ಸಚಿವರು ನಮ್ಮ ಬಗ್ಗೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.