ADVERTISEMENT

ಅಂಚೆ ಮತಪತ್ರದ ಗೊಂದಲ: ಹಲ್ಲೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 3:10 IST
Last Updated 2 ಜನವರಿ 2021, 3:10 IST

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಮತಗಳ ಎಣಿಕೆ ಮುಕ್ತಾಯವಾದ ಎರಡು ದಿನಗಳ ನಂತರ ಹಳ್ಳಿಗಳಲ್ಲಿ ಘರ್ಷಣೆ ನಡೆದಿದ್ದು, ಹಲ್ಲೆಗೆ ಒಳಗಾದವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚುನಾವಣ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕರಿಗೆ ಅಂಚೆ ಮತಪತ್ರ (ಇಡಿಸಿ)ಗಳನ್ನು ಸರ್ಕಾರ ನೀಡುತ್ತದೆ. ಈ ಮತಗಳನ್ನು ಎಣಿಕೆ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲೇ ಪ್ರತ್ಯೇಕವಾಗಿ ಎಣಿಕೆ ಮಾಡಿ ಇಂತಹವರಿಗೆ ಮತ ಹಾಕಲಾಗಿದೆ ಎಂದು ತಿಳಿಸಲಾಗುತ್ತದೆ.

ಅಂಚೆ ಮತಪತ್ರ ಒಂದರಿಂದಲೇ ಗಂಟಿಗಾನಹಳ್ಳಿ ಗ್ರಾಮದಲ್ಲಿ ಅಭ್ಯರ್ಥಿಯೊಬ್ಬರು ಸೋಲು ಕಾಣುವಂತಾಗಿತ್ತು. ಇದೇ ರೀತಿ ಅಲಪನಹಳ್ಳಿ ಗ್ರಾಮದಲ್ಲಿ ಶಿಕ್ಷಕರಾಗಿರುವ ಹನುಮಂತರಾಯಪ್ಪ ಅವರು ‘ಅಂಚೆ ಮತಪತ್ರ ನಮ್ಮವರಿಗೆ ನೀಡಿಲ್ಲ’ ಎನ್ನುವ ಕಾರಣಕ್ಕೆ ಶಿಕ್ಷಕರ ಮೇಲೆ ಶಾಲೆ ಸಮೀಪವೇ ಹಲ್ಲೆ ನಡೆಸಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಹನುಮಂತರಾಯಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ADVERTISEMENT

ಅಂಚೆ ಮತಪತ್ರಕ್ಕಾಗಿ ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವುದನ್ನು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜೈಕುಮಾರ್‌, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಪ್ರಭಾರ ಅಧ್ಯಕ್ಷ ಎಂ.ಎಸ್‌.ರಾಜಶೇಖರ್‌ ಖಂಡಿಸಿದ್ದಾರೆ. ಈ ಬಗ್ಗೆ ಮಾಹಿತಿ
ನೀಡಿ, ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಹಲ್ಲೆ ನಡೆಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಅಂಚೆ ಮತಪತ್ರಗಳನ್ನು ಇತರ ಮತ ಪತ್ರಗಳೊಂದಿಗೆ ಮಿಶ್ರಣ ಮಾಡಿ ಎಣಿಕೆ ಮಾಡಬೇಕು. ಇದರಿಂದ ಯಾವ ಅಭ್ಯರ್ಥಿಗೆ ಅಂಚೆ ಮತ ಹಾಕಲಾಗಿದೆ ಎನ್ನುವುದು ತಿಳಿಯುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.