ದೊಡ್ಡಬಳ್ಳಾಪುರ: ‘ಮಕ್ಕಳಿಗೆ ಪಠ್ಯದ ಜೊತೆಗೆ ಮೌಲ್ಯಗಳನ್ನು ಕಲಿಸಬೇಕಿದೆ. ಪಠ್ಯೇತರ ಚಟುವಟಿಕೆಗಳು ನಮ್ಮಲ್ಲಿ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಶುಭಮಂಗಳ ಹೇಳಿದರು.
ನಗರದ ಎಂ.ಎಸ್.ವಿ ಪಬ್ಲಿಕ್ ಶಾಲೆಯಲ್ಲಿ 2021-22ನೇ ಸಾಲಿನ ವಿದ್ಯಾರ್ಥಿ ಸಮಿತಿ ಚುನಾವಣೆಯಲ್ಲಿ ಚುನಾಯಿತರಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅಧಿಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶೈಕ್ಷಣಿಕ ಕ್ಷೇತ್ರದ ಕೊಡುಗೆ ಪ್ರಮುಖ ಪಾತ್ರ ವಹಿಸುತ್ತದೆ. ಪಠ್ಯ ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಕಲಿಸುವಲ್ಲಿ ಶಿಕ್ಷಣ ಕ್ಷೇತ್ರ ಶ್ರಮವಹಿಸುತ್ತದೆ’ ಎಂದರು.
ನಗರ ಪೊಲೀಸ್ ಠಾಣೆಯ ಎಎಸ್‌ಐ ಅಶ್ವತ್ಥನಾರಾಯಣ ಹಾಗೂ ಮಹೇಶ್ ಮಾತನಾಡಿ, ‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಶಾಲಾ ಹಂತದಲ್ಲಿಯೇ ಶಿಸ್ತು, ನಾಯಕತ್ವ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡರೆ ದೇಶಕ್ಕೆ ಉತ್ತಮ ಪ್ರಜೆಗಳ ಕೊಡುಗೆ ಸಾಧ್ಯ. ಶಾಲೆಗಳಲ್ಲಿ ಕಾನೂನು ಪರಿಪಾಲನೆಯ ಬಗ್ಗೆಯೂ ಅರಿವು ಮೂಡಿಸಬೇಕು’ ಎಂದು ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶಿಸ್ತಿನ ಬಗ್ಗೆ ತಿಳಿಸಿಕೊಟ್ಟರು.
ಶಾಲಾ ಸಂಸ್ಥಾಪಕ ಎ.ಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರು ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಶಾಲೆಯಲ್ಲಿ ನಡೆದ ಶಿಸ್ತಿನ ಕವಾಯಿತು ಮತ್ತು ಪ್ರತಿಜ್ಞಾವಿಧಿಗಳು ನಡೆದವು. ಶಾಲಾ ನಾಯಕ ಅಭಿಷೇಕ್‌ಗೌಡ, ಉಪನಾಯಕ ಎಂ.ಹರ್ಷಿತ್, ಶಾಲಾ ನಾಯಕಿ ಜಿ.ಬಿ.ತನಿಶಾ, ಉಪನಾಯಕಿ ಜಿ.ಸಿ.ತುಷಿತಾ, ಒಳಗೊಂಡಂತೆ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿವಿಧ ಪ್ರತಿನಿಧಿಗಳಿಗೆ ಅಧಿಕಾರ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಪ್ರಾಂಶುಪಾಲ ನಾಗರತ್ನ.ಎನ್.ಪಾಲನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.