ADVERTISEMENT

ವಿಜಯಪುರ: ಹಸಿರು ಹೊದ್ದ ಸರ್ಕಾರಿ ಶಾಲೆ

ಕೊರೊನಾ ಭೀತಿ ನಡುವೆ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳ

ಎಂ.ಮುನಿನಾರಾಯಣ
Published 8 ಆಗಸ್ಟ್ 2021, 4:46 IST
Last Updated 8 ಆಗಸ್ಟ್ 2021, 4:46 IST
ವಿಜಯಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರವೇಶ ದ್ವಾರ
ವಿಜಯಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರವೇಶ ದ್ವಾರ   

ವಿಜಯಪುರ:ಶೈಕ್ಷಣಿಕ ಕ್ಷೇತ್ರಕ್ಕೆ ಸರ್ಕಾರ ಮಾತ್ರವಲ್ಲದೆ ಸಮುದಾಯ ಮತ್ತು ದಾನಿಗಳು ಸಹಕಾರ ನೀಡಿದರೆ ಖಾಸಗಿ ಶಾಲೆಗಳನ್ನೂ ನಾಚಿಸುವಷ್ಟರ ಮಟ್ಟಿಗೆ ಸರ್ಕಾರಿ ಶಾಲೆಗಳು ಕಂಗೊಳಿಸುತ್ತವೆ ಎಂಬುದಕ್ಕೆ ಪಟ್ಟಣದ ಸರ್ಕಾರಿ ಶಾಲೆ ಉತ್ತಮ ಉದಾಹರಣೆಯಾಗಿದೆ.

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಆವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಕೊರೊನಾ ಸಂಕಷ್ಟದ ನಂತರ ಶಾಲೆಗೆ ಬರಲಿರುವ ಮಕ್ಕಳಿಗೆ ಮುದ ನೀಡುವಂತಹ ವಾತಾವರಣವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ.

ಶಾಲೆಯ ಮುಂಭಾಗಕ್ಕೆ ಬರುತ್ತಿದ್ದಂತೆ ಹಚ್ಚ ಹಸಿರಿನ ಸ್ವಾಗತ ಸಿಗುತ್ತದೆ. ಒಳಗೆ ಪ್ರವೇಶಿಸುತ್ತಿದ್ದಂತೆ ಉತ್ತಮ ನೆಲಹಾಸಿನಿಂದ ಕೂಡಿದ ವಿಶಾಲವಾದ ಮೈದಾನ, ಮೈದಾನಕ್ಕೆ ಬಿಸಿಲು ಬೀಳದಂತೆ ಛತ್ರಿಯಾಕಾರದಲ್ಲಿರುವ ಎರಡು ಮರಗಳ ಕೊಂಬೆಗಳು, ಎದುರಿಗೆ ರಂಗಮಂದಿರ, ದೇವಾಲಯ ಎಲ್ಲವೂ ಸಕಾರಾತ್ಮಕ ಭಾವನೆಯನ್ನು ಉಂಟು ಮಾಡಿ ಕಲಿಕೆಗೆ ಹೆಚ್ಚು ಪ್ರೋತ್ಸಾಹದಾಯಕವಾಗಿದೆ.

ADVERTISEMENT

ಶಾಲೆಯಲ್ಲಿ ಸರ್ಕಾರದ ಅನುದಾನದ ಜೊತೆಗೆ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡಿರುವ 24 ಕೊಠಡಿಗಳು, 14 ಶಿಕ್ಷಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸಂಕಷ್ಟದ ಕಾರಣದಿಂದಾಗಿ ಖಾಸಗಿ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆಯೂ ಹೆಚ್ಚಳವಾಗಿದೆ.

ಎಂಟನೇ ತರಗತಿಗೆ 93 ಮಂದಿ, ಒಂಬತ್ತನೇ ತರಗತಿ 178 ಮಂದಿ, ಹತ್ತನೇ ತರಗತಿಗೆ 198 ವಿದ್ಯಾರ್ಥಿಗಳು ದಾಖಲಾಗಿದ್ದು, ಇನ್ನೂ ದಾಖಲಾಗುವ ಮಕ್ಕಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯೂ ಇದೆ. ಶಾಲೆಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ಮಕ್ಕಳ ಸುರಕ್ಷತೆ ಕುರಿತು ವಿಶೇಷ ನಿಗಾವಹಿಸಲಾಗುತ್ತಿದೆ.

ಸುಸಜ್ಜಿತವಾದ ಕೊಠಡಿಗಳಲ್ಲಿ ಬೋಧನೆಯ ಜೊತೆಗೆ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಕ್ರೀಡಾ ಕೊಠಡಿ, ಮಾಹಿತಿ ತಂತ್ರಜ್ಞಾನ, ಆಟೊಮೊಬೈಲ್ಸ್, ಕ್ರಾಫ್ಟ್‌, ಪ್ರಯೋಗಾಲಯ ಸೇರಿದಂತೆ ಕಲಿಕೆಗೆ ಪೂರಕವಾಗಿರುವ ವಾತಾವರಣವನ್ನು ಇಲ್ಲಿ ನಿರ್ಮಾಣ ಮಾಡಲಾಗಿದ್ದು, ಖಾಸಗಿ ಶಾಲಾ, ಕಾಲೇಜುಗಳಿಗಿಂತಲೂ ಉತ್ತಮವಾದ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ.

ಶಾಲೆಯ ಒಳಾವರಣದ ಸುತ್ತಲೂ ಬಣ್ಣ ಬಣ್ಣದ ಅಲಂಕಾರಿಕ ಹೂಗಳ ಸಸಿಗಳು ಕಂಗೊಳಿಸುತ್ತಿವೆ. ಶಾಲೆಯ ಒಳಭಾಗದಲ್ಲಿನ ಪ್ರತಿಯೊಂದು ಕಂಬದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಜ್ಞಾನಿಗಳು ಸೇರಿದಂತೆ ರಾಷ್ಟ್ರ ನಾಯಕರ ಭಾವಚಿತ್ರಸಹಿತ ಸಂಪೂರ್ಣ ವಿವರ ನೀಡಲಾಗಿದೆ.

ಹಸರೀಕರಣ, ಸ್ವಚ್ಛತೆ, ನೈರ್ಮಲ್ಯ, ನೀರಿನ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಎಲ್ಲಾ ವಿಭಾಗಗಳನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಇದೇ ಶಾಲೆಯಲ್ಲಿ ಸಾಕಷ್ಟು ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ, ಸಾಹಿತ್ಯದ ಕಾರ್ಯಕ್ರಮಗಳು ಸೇರಿದಂತೆ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚಾಗಿರುವ ದಿನಗಳಲ್ಲಿ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಅನೇಕ ಮಂದಿ ದಾನಿಗಳು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ, ಶಾಲೆಗೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಕಡೆಗೆ ಗಮನ ಹರಿಸುತ್ತಿರುವುದರಿಂದ ಶಾಲೆಯು ಹೆಚ್ಚು ಖ್ಯಾತಿಗಳಿಸಿಕೊಳ್ಳಲಿಕ್ಕೆ ಸಾಧ್ಯವಾಗಿದೆ.

ಪ್ರತಿವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲು ಇಲ್ಲಿನ ಶಿಕ್ಷಕರು ವಿಷಯವಾರು ಹೆಚ್ಚು ಆಸಕ್ತಿವಹಿಸಿ ಕೆಲಸ ಮಾಡುತ್ತಿರುವುದು ಕೂಡ ಉತ್ತಮ ಫಲಿತಾಂಶ ಬರಲಿಕ್ಕೆ ಕಾರಣವಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರಶಂಸೆಗೂ ಶಾಲೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.