ADVERTISEMENT

ಖಾಸಗಿ ಶಾಲಾ ಶಿಕ್ಷಕರಿಗೆ ದಿನಸಿ ಕಿಟ್‌

ಗುರುಗಳಿಗೆ ನೆರವಾದ ಹಳೆಯ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 4:36 IST
Last Updated 18 ಜೂನ್ 2021, 4:36 IST
ದೊಡ್ಡಬಳ್ಳಾಪುರದ ಭಗತ್‌ ಸಿಂಗ್ ಕ್ರೀಡಾಂಗಣದಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಸತೀಶ್ ದಿನಸಿ ಕಿಟ್‍ ವಿತರಿಸಿದರು
ದೊಡ್ಡಬಳ್ಳಾಪುರದ ಭಗತ್‌ ಸಿಂಗ್ ಕ್ರೀಡಾಂಗಣದಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಸತೀಶ್ ದಿನಸಿ ಕಿಟ್‍ ವಿತರಿಸಿದರು   

ದೊಡ್ಡಬಳ್ಳಾಪುರ:ಸ್ವಾಮಿ ವಿವೇಕಾನಂದ ಶಾಲೆಯ ಹಳೇ ವಿದ್ಯಾರ್ಥಿ ಬಿ.ಸಿ. ರೇಖಾ ನೇತೃತ್ವದಲ್ಲಿ ವಿವಿಧ ಖಾಸಗಿ ಶಾಲೆಗಳಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳ ಆರ್ಥಿಕ ನೆರವಿನಿಂದ ಆಹಾರ ದಿನಸಿ ಕಿಟ್‍ಗಳನ್ನು ಖಾಸಗಿ ಶಾಲಾ ಶಿಕ್ಷಕ, ಶಿಕ್ಷಕಿಯರಿಗೆ ವಿತರಣೆ ಮಾಡಲಾಯಿತು.

ರೇಖಾ ಮಾತನಾಡಿ, ‘ನಮಗೆ ವಿದ್ಯೆ ನೀಡಿದ ಶಿಕ್ಷಕರಿಗೆ ಋಣ ತೀರಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಹಳೆಯ ವಿದ್ಯಾರ್ಥಿಗಳಾದ ನಾವು ನಮ್ಮದೇ ಹಣದಿಂದ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸೇರಿದಂತೆ ಅಗತ್ಯವಾದ ಪರಿಕರಗಳನ್ನು ನಮ್ಮ ಗುರುಗಳಿಗೆ ನೀಡಿದ್ದೇವೆ. ಈ ಮೂಲಕ ನಮಗೆ ಪಾಠ ಹೇಳಿದ ಗುರುಗಳ ನೆರವಿಗೆ ಸದಾ ಇರುತ್ತೇವೆ’ ಎಂದು ಹೇಳಿದರು.

ಕೋವಿಡ್‌ ಬಂದಾಗಿನಿಂದಲೂ ಖಾಸಗಿ ಶಾಲಾ ಶಿಕ್ಷಕರಿಗೆ ನಿಜಕ್ಕೂ ಕಷ್ಟದ ದಿನಗಳಾಗಿವೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಸಂಕಷ್ಟಕ್ಕೆ ಸರ್ಕಾರ, ಆಡಳಿತ ಮಂಡಳಿಗಳು ಸ್ಪಂದಿಸುತ್ತಿಲ್ಲ. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮೂಲಕ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ನಿಲ್ಲಬೇಕಿದೆ ಎಂದರು.

ADVERTISEMENT

ಸರ್ಕಲ್‍ ಇನ್‌ಸ್ಪೆಕ್ಟರ್‌ ಸತೀಶ್ ಮಾತನಾಡಿ, ಸಂಕಷ್ಟದ ಕಾಲದಲ್ಲಿ ಪಾಠ ಹೇಳಿದ ಗುರುಗಳ ನೆರವಿಗೆ ಬಂದಿರುವ ಹಳೆಯ ವಿದ್ಯಾರ್ಥಿಗಳ ಸೇವಾಪರತೆ ಮಾದರಿಯಾಗಿದೆ. ಈ ಮೂಲಕ ಉನ್ನತ ಉದ್ಯೋಗದಲ್ಲಿರುವ ವಿದ್ಯಾರ್ಥಿಗಳು ತಮಗೆ ಪಾಠ ಹೇಳಿದ ಶಿಕ್ಷಕರ ನೆರವಿಗೆ ಬಂದರೆ ಇಂದಿನ ಈ ಸೇವಾ ಕಾರ್ಯಕ್ಕೆ ಮತ್ತಷ್ಟು ಮಹತ್ವ ಸಿಗುತ್ತದೆ ಎಂದು ಹೇಳಿದರು.

ಕೊರೊನಾ ಮಾರ್ಗಸೂಚಿ ಪಾಲಿಸಲು ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.

ದಿನಸಿ ಕಿಟ್ ವಿತರಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ರಾಜ್ಯ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಸುರೇಶ್ ಸಹ ನೆರವು ನೀಡಿದ್ದರು.

ಸಬ್‌ ಇನ್‌ಸ್ಪೆಕ್ಟರ್‌ ಗೋವಿಂದ್, ಕರವೇ ಕನ್ನಡಿಗರ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್, ಗೌರವಾಧ್ಯಕ್ಷ ಶಿವಶಂಕರಪ್ಪ, ಕಾರ್ಮಲ್‌ ಜ್ಯೋತಿ ಶಾಲೆಯ ನೇತ್ರಾ, ಸ್ವಾಮಿ ವಿವೇಕಾನಂದ ಶಾಲೆಯ ಶಾಮಲಾ, ಸೀಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.