ADVERTISEMENT

ಹಾರೋಹಳ್ಳಿ ಗ್ರಾ.ಪಂ | ಈ ಸಮಯ ‘ಮಂಜುಳ’ಮಯ: ಅಧ್ಯಕ್ಷೆ, ಉಪಾಧ್ಯಕ್ಷೆಯ ಹೆಸರು ಒಂದೇ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 2:31 IST
Last Updated 9 ಡಿಸೆಂಬರ್ 2025, 2:31 IST
ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಚಿಕ್ಕನಹಳ್ಳಿ ಎಸ್.ಮಂಜುಳಾ, ಉಪಾಧ್ಯಕ್ಷೆಯಾಗಿ ಹಾರೋಹಳ್ಳಿ ಮಂಜುಳಾ ಆಯ್ಕೆಗೊಂಡರು
ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಚಿಕ್ಕನಹಳ್ಳಿ ಎಸ್.ಮಂಜುಳಾ, ಉಪಾಧ್ಯಕ್ಷೆಯಾಗಿ ಹಾರೋಹಳ್ಳಿ ಮಂಜುಳಾ ಆಯ್ಕೆಗೊಂಡರು   

ವಿಜಯಪುರ (ದೇವನಹಳ್ಳಿ): ಹಾರೋಹಳ್ಳಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ  ನಡೆದ ಚುನಾವಣೆ ‘ಮಂಜುಳ’ಮಯವಾಗಿತ್ತು! 

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ, ಅದೇ ಪಕ್ಷದ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದರು. ಇಬ್ಬರ ಹೆಸರೂ ಮಂಜುಳಾ! ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಕೂಡ ಮಂಜುಳಾ

ಅಧ್ಯಕ್ಷ ಸ್ಥಾನಕ್ಕೆ ಒಂದೇ ಹೆಸರಿನ ಇಬ್ಬರು, ಚಿಕ್ಕನಹಳ್ಳಿ ಎಸ್.ಮಂಜುಳಾ ಹಾಗೂ ಬುಳ್ಳಹಳ್ಳಿ ಎನ್.ಮಂಜುಳಾ ನಾಮಪತ್ರ ಸಲ್ಲಿಸಿದ್ದರು. ಈ ಇಬ್ಬರೂ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರು ಎನ್ನುವುದು ವಿಶೇಷ! 

ADVERTISEMENT

ಕುತೂಹಲ ಕೆರಳಿಸಿದ್ದ ಕಣದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಸ್.ಮಂಜುಳಾ 8 ಮತಗ ಪಡೆದು ಜಯಶೀಲರಾದರೆ, ಎನ್.ಮಂಜುಳಾ  4 ಮತ ಪಡೆದು ಪರಾಜಿತಗೊಂಡರು. ಹಾರೋಹಳ್ಳಿ ಗ್ರಾಮದ ಸದಸ್ಯೆ ಮಂಜುಳಾ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

ಹಾರೋಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 12 ಸದಸ್ಯರು ಹಾಜರಾಗಿದ್ದರು ಎಂದು ಚುನಾವಣಾಧಿಕಾರಿ ಧನಂಜಯ್ ತಿಳಿಸಿದರು.

ಗೊಂದಲಕ್ಕೆ ಕಾರಣವೇನು?: ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬುಳ್ಳಹಳ್ಳಿ ಎನ್.ಮಂಜುಳಾ ಅವರನ್ನು ಚುನಾವಣೆಗೂ ಮುನ್ನ ಕಾಂಗ್ರೆಸ್‍  ಮುಖಂಡರು ಭೇಟಿಯಾಗಿ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗುವುದು ಎಂದು ಮನವೊಲಿಸಿದ್ದರು. 

ಆದರೆ, ಸೋಮವಾರ ನಡೆದ ಚುನಾವಣೆಯಲ್ಲಿ ಎನ್.ಮಂಜುಳಾ ದಿಢೀರನೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ, ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡು ಕೆಲಕಾಲ ಗೊಂದಲ ಉಂಟು ಮಾಡಿದರು.

ಬಿಜೆಪಿಯಲ್ಲಿದ್ದ ಅವರು ಕಾಂಗ್ರೆಸ್‍ಗೆ ಸೇರಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಹೈಕಮಾಂಡ್ ಹೇಳಿದಂತೆ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆ ಚಿಕ್ಕನಹಳ್ಳಿ ಎಸ್.ಮಂಜುಳಾ ಆಯ್ಕೆಯಾಗಿದ್ದಾರೆ. ಅವರು 40 ವರ್ಷದಿಂದ ಪಕ್ಷಕ್ಕೆ ಸಲ್ಲಿಸಿದ ಸೇವೆ ಕೊನೆಗೂ ಕೈ ಹಿಡಿದಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್, ಹಾರೋಹಳ್ಳಿ ರಘು, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಬಯಪಾ ನಿರ್ದೇಶಕ ವಿ.ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಚೈತ್ರಾ ವೀರೇಗೌಡ, ವಿಜಯಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವೀರೇಗೌಡ, ಬಿಜ್ಜವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡ, ಕೋರಮಂಗಲ ಪಂಚಾಯಿತಿ ಅಧ್ಯಕ್ಷ ಧನಂಜಯ, ಧರ್ಮಪುರ ಕೃಷ್ಣಪ್ಪ, ಯಲುವಹಳ್ಳಿ ನಟರಾಜ್. ವೆಂಕಟಗಿರಿಕೋಟೆ ಆರ್.ಅಮರನಾಥ್, ತಿಮ್ಮಹಳ್ಳಿಮನೋಹರ್, ಚಿಕ್ಕನಹಳ್ಳಿ ಸುಭ್ರಮಣಿ, ಗೊಡ್ಲುಮುದ್ದೇನಹಳ್ಳಿ ಮುನಿರಾಜು, ಹಾರೋಹಳ್ಳಿ ಚಂದ್ರಪ್ಪ, ಚಿಕ್ಕನಹಳ್ಳಿ ಸೀನಪ್ಪ, ಗುತ್ತಿಗೆದಾರ ಚಿಕ್ಕನಹಳ್ಳಿ ವೆಂಕಟೇಶಪ್ಪ ಇದ್ದರು.

ಎನ್.ಮಂಜುಳಾ ವಿರುದ್ಧ ಶಿಸ್ತು ಕ್ರಮ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷ ಬೆಂಬಲಿತ ಅಭ್ಯರ್ಥಿಯಾಗಿದ್ದ ಎಸ್.ಮಂಜುಳಾ ಅವರ ವಿರುದ್ಧ ಸ್ಪರ್ಧಿಸಿ ನಾಲ್ಕು ಮತ ಪಡೆದ ಸದಸ್ಯೆ ಎನ್.ಮಂಜುಳಾ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಕೈಗೊಂಡ ಕಾರಣ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.