ADVERTISEMENT

ಎಲ್ಲ ಅಂತಸ್ತಿಗಿಂತ ಆರೋಗ್ಯ ದೊಡ್ಡ ಭಾಗ್ಯ: ಚಿ. ಮಾ. ಸುಧಾಕರ್

ವಿಜಯಪುರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಮೇ 2019, 13:45 IST
Last Updated 4 ಮೇ 2019, 13:45 IST
ವಿಜಯಪುರದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕಸಾಪದಿಂದ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯ ಡಾ.ಶ್ಯಾಂಸುಂದರ್ ಮಾತನಾಡಿದರು
ವಿಜಯಪುರದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕಸಾಪದಿಂದ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯ ಡಾ.ಶ್ಯಾಂಸುಂದರ್ ಮಾತನಾಡಿದರು   

ವಿಜಯಪುರ: ಭಾರತ ದೇಶ ಶೇ 68 ರಷ್ಟು ಯುವಕರನ್ನೇ ಹೊಂದಿದ್ದು, ಯುವ ಜನತೆಯೆ ನಮ್ಮ ದೇಶದ ಅಮೂಲ್ಯ ಆಸ್ತಿ. ಆದರೆ ಅವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವ ಅವಶ್ಯಕತೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ. ಮಾ. ಸುಧಾಕರ್ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯುವಜನರು ಜಾಹೀರಾತುಗಳಿಗೆ ಮಾರು ಹೋಗಿ ಕುರುಕಲು ತಿಂಡಿ ಹಾಗೂ ಕಲಬೆರಕೆ ಆಹಾರದ ಬಗ್ಗೆ ವ್ಯಾಮೋಹ ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಮ್ಮ ದೇಶಿ, ಸ್ಥಳೀಯ ಹಾಗೂ ಸಾಂಪ್ರದಾಯಿಕ ಆಹಾರ ಪದಾರ್ಥಗಳೇ ನಮ್ಮ ಉತ್ತಮ ಆರೋಗ್ಯದ ಅವಶ್ಯಕತೆಗಳಾಗಿವೆ’ ಎಂದರು.

ADVERTISEMENT

ಯುವಜನತೆ ಉತ್ತಮ ಆರೋಗ್ಯದ ಮೂರು ಮಂತ್ರಗಳಾದ ಆಹಾರ, ವ್ಯಾಯಾಮ ಮತ್ತು ಶುದ್ಧ ಪರಿಸರದ ಅಳವಡಿಕೆಯನ್ನು ಜೀವನದುದ್ದಕ್ಕೂ ಪಾಲಿಸಬೇಕು ಎಂದರು.

ಮಾನವನಿಗೆ ಜೀವನದಲ್ಲಿ ಎಲ್ಲ ಆಸ್ತಿ ಅಂತಸ್ತುಗಳಿಗಿಂತ ಆರೋಗ್ಯವೇ ದೊಡ್ಡ ಭಾಗ್ಯವಾಗಿದೆ. ಆಸ್ಪತ್ರೆಗಳಲ್ಲಿ ಜನಸಮೂಹದ ಆರೋಗ್ಯವನ್ನು ಕಾಪಾಡುವಲ್ಲಿ ಸಿಬ್ಬಂದಿ ಕಾರ್ಯವು ಶ್ಲಾಘನೀಯ. ಜನರೂ ಕೂಡಾ ಅವರನ್ನು ಗೌರವಿಸುವಂತಹ ಕೆಲಸವಾಗಬೇಕು ಎಂದರು.

ವೈದ್ಯ ಡಾ.ಶ್ಯಾಂಸುಂದರ್ ಮಾತನಾಡಿ, ಆರೋಗ್ಯವಿಲ್ಲದ ಮನುಷ್ಯ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದರು.

ದೇಶದಲ್ಲಿ ಸದೃಢ, ಆರೋಗ್ಯವಂತ ನಾಗರಿಕರನ್ನಾಗಿ ಮಾಡುವುದು ಅವಶ್ಯವಿದೆ. ಪ್ರತಿಯೊಬ್ಬರೂ ಆರೋಗ್ಯವಂತರಾಗಿದ್ದಾಗ ಮಾತ್ರವೇ ಸದೃಢ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಸಾರ್ವಜನಿಕರು ಆರೋಗ್ಯವಾಗಿರಲು ಪೌಷ್ಠಿಕ ಆಹಾರದ ಸೇವನೆಯು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ ಮಾತನಾಡಿ, ಮನುಷ್ಯನ ಆರೋಗ್ಯ ಉತ್ತಮವಾಗಿದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಮಕ್ಕಳು ಶಾರೀರಿಕ ಮತ್ತು ಮಾನಸಿಕವಾಗಿ ಸದೃಢರಾದಾಗ ಮಾತ್ರ ಬಲಿಷ್ಠ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಎಲ್ಲ ವಯೋಮಾನದವರು ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರ ಮೂಲಕ ಆರೋಗ್ಯ ಸಂರಕ್ಷಣೆಗೆ ಮುಂದಾಗಬೇಕು. ವಿಶೇಷವಾಗಿ ಯುವ ಜನತೆ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಯಾವುದೇ ರೀತಿಯಿಂದ ದುಶ್ಟಟಗಳಿಗೆ ಬಲಿಯಾಗಬಾರದು. ಉತ್ತಮವಾಗಿ ಜೀವನ ನಡೆಸಲು ಒಳ್ಳೆಯ ಆರೋಗ್ಯ ಕಾಪಾಡಿಕೊಂಡು ಬರುವುದು ಎಲ್ಲರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಆರೋಗ್ಯವಂತ ಮಗು ಹುಟ್ಟಬೇಕಾದರೆ ಅದು ಎರಡು ಸಾವಿರಕ್ಕೂ ಹೆಚ್ಚು ಅನುವಂಶಿಕ ರೋಗಗಳನ್ನು ದಾಟಿಬರುತ್ತದೆ. ಆರೋಗ್ಯವಂತರಾಗಿ ಹುಟ್ಟುವುದೇ ದೇವರು ನಮಗೆ ಕೊಡುವ ಅತ್ಯಮೂಲ್ಯ ಉಡುಗೊರೆ ಎಂದರು.

ಹೀಗಾಗಿ ದೇವರ ಆಶಿರ್ವಾದದಿಂದ ಕೃಪಾಪೋಷಿತರಾದ ನಾವೆಲ್ಲರೂ ಸದೃಢ ಆರೋಗ್ಯವನ್ನು ಕಾಯ್ದುಕೊಂಡು ಹೋಗುವುದು ಬಹುಮುಖ್ಯ ಎಂದರು.

ವೈದ್ಯ ಡಾ.ರಾಜು, ಕಸಾಪ ಕಾರ್ಯದರ್ಶಿ ಆರ್. ಮುನಿರಾಜು, ನಾರಾಯಣಸ್ವಾಮಿ, ಚಂದ್ರಶೇಖರ ಹಡಪದ್, ಕೆ.ಎಚ್. ಚಂದ್ರಶೇಖರ್, ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.