ADVERTISEMENT

ಬೇಸಿಗೆಯಲ್ಲಿ ಅಧಿಕಾರಿಗಳ ಹೈರಾಣ

ಕುಡಿಯುವ ನೀರು ಪೂರೈಕೆ ಜತೆಗೆ ಮೋಟಾರು ರಿಪೇರಿಗೆ ಹಣ ಹೊಂದಿಸುವ ಸಂಕಷ್ಟ

ಎಂ.ಮುನಿನಾರಾಯಣ
Published 23 ಏಪ್ರಿಲ್ 2019, 13:24 IST
Last Updated 23 ಏಪ್ರಿಲ್ 2019, 13:24 IST
ವಿಜಯಪುರದಲ್ಲಿ ರಿಪೇರಿಗಾಗಿ ಬಂದಿರುವ ಮೋಟಾರು – ಪಂಪ್
ವಿಜಯಪುರದಲ್ಲಿ ರಿಪೇರಿಗಾಗಿ ಬಂದಿರುವ ಮೋಟಾರು – ಪಂಪ್   

ವಿಜಯಪುರ: ಬೇಸಿಗೆಯಲ್ಲಿ ಬಸವಳಿದಿರುವ ಜನರಿಗೆ ಕುಡಿಯಲು ನೀರು ಪೂರೈಕೆ ಸವಾಲಾಗಿ ಪರಿಣಮಿಸಿರುವುದು ಒಂದು ಕಡೆಯಾದರೆ, ಕೊಳವೆ ಬಾವಿಗಳಲ್ಲಿ ಪದೇ ಪದೇ ಸುಟ್ಟು ಹೋಗುವ ಪಂಪು, ಮೋಟಾರು ರಿಪೇರಿಗಾಗಿ ಹಣ ಹೊಂದಿಸುವುದು ಪಂಚಾಯಿತಿ ಅಧಿಕಾರಿಗಳಿಗೆ ಮತ್ತೊಂದು ಸವಾಲಿನ ಕೆಲಸವಾಗಿ ಪರಿಣಮಿಸಿದೆ.

ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಸರ್ಕಾರ ಸ್ಥಳೀಯ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆಗಳಿಗೆ ಯಾವುದೇ ನಿಬಂಧನೆ ವಿಧಿಸದೆ ಅನುದಾನ ಬಳಕೆಗೆ ಅವಕಾಶ ನೀಡಿದೆ. ಆದರೆ, ನೀರು ಪೂರೈಕೆ ಮಾಡಲು ಅಧಿಕಾರಿಗಳು ಪರದಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿ, ಪುರಸಭೆ ವ್ಯಾಪ್ತಿಯಲ್ಲಿ ತಿಂಗಳಲ್ಲಿ ಕನಿಷ್ಠ 4 ರಿಂದ 5 ಬಾರಿ ಕೊಳವೆಬಾವಿ ಮೋಟಾರ್‌ಗಳು ಸುಟ್ಟು ಹೋಗುತ್ತಿವೆ. ಒಂದು ಕೊಳವೆ ಬಾವಿಯಿಂದ ಪಂಪು, ಮೋಟಾರು ಹೊರತೆಗೆಯಬೇಕಾದರೆ ಅಡಿಗಳ ಲೆಕ್ಕದಲ್ಲಿ 1000 ಅಡಿಗೆ ಕನಿಷ್ಠ ₹5 ಸಾವಿರ ಖರ್ಚು ಮಾಡಬೇಕಾಗಿದೆ. ಪಂಪು, ಮೋಟಾರು ರಿಪೇರಿಗೆ ₹20 ಸಾವಿರದವರೆಗೂ ವ್ಯಯವಾಗುತ್ತದೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ವಾರ್ಷಿಕ ಟೆಂಡರ್ ಕರೆದು ಕೊಡಲಾಗುತ್ತದೆ. ಗುತ್ತಿಗೆದಾರರೇ ಅದರ ಹೊಣೆ ಹೊತ್ತು ರಿಪೇರಿ ಮಾಡಿಸಬೇಕು. ಕೆಲವೊಮ್ಮೆ ಕೇಬಲ್ ಸುಟ್ಟುಹೋಗಿದ್ದರೆ ಬೇರೆ ಕೇಬಲ್ ಅಳವಡಿಸಬೇಕು. ಬಿಡಿಭಾಗಗಳು ಹೋಗಿದ್ದರೂ ಅವರೇ ಅದರ ವೆಚ್ಚ ಭರಿಸಬೇಕು. ಇದಕ್ಕೆ ವಾರ್ಷಿಕವಾಗಿ ಪಂಚಾಯಿತಿಗಳಲ್ಲಿ ₹3ಲಕ್ಷದವರೆಗೂ ಟೆಂಡರ್ ಕೊಡಲಾಗುತ್ತದೆ. ಹೆಚ್ಚು ಹಳ್ಳಿಗಳಿರುವ ಪಂಚಾಯಿತಿಗಳಲ್ಲಿ ₹5 ಲಕ್ಷದವರೆಗೂ ಟೆಂಡರ್ ಕೊಡಲಾಗುತ್ತದೆ.

ಬೇಸಿಗೆಯಲ್ಲಿ ಕೊಳವೆ ಬಾವಿಗಳು ವಿಫಲವಾದಾಗ ಸಮೀಪದ ರೈತರಿಂದ ನೀರು ಖರೀದಿಸಿ ಪೂರೈಕೆ ಮಾಡಬೇಕು. ನೀರು ಕಡಿಮೆ ಇರುವ ಕಾರಣ ರೈತರು ಹಿಂದೇಟು ಹಾಕುತ್ತಿದ್ದಾರೆ. ಈ ವಿಷಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ADVERTISEMENT

ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಬಿಗಾಡಾಯಿಸುತ್ತಿದೆ. ಎಷ್ಟೇ ಕೊಳವೆ ಬಾವಿಗಳು ಕೊರೆದರೂ ಅಂತರ್ಜಲದ ಮಟ್ಟ ಕುಸಿದಿರುವ ಕಾರಣ ನೀರು ಸಿಗುವುದು ಖಾತ್ರಿ ಇಲ್ಲ. ಟ್ಯಾಂಕರ್‌ಗಳ ಮೂಲಕ ತಾಲ್ಲೂಕಿನ 25 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ವರ್ಷ ಬೇಸಿಗೆ ಎದುರಿಸುವುದು ಕಷ್ಟವಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಕುಡಿಯುವ ನೀರಿನ ವಿಭಾಗದ ಎಇಇ ಸೋಮಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.