ADVERTISEMENT

ನೀರಿನ ಸಂಪರ್ಕಕ್ಕೆ ₹ 5,250: ಆಕ್ರೋಶ

ಪುರಸಭೆಗೆ ಆದಾಯ ಕ್ರೋಡೀಕರಣಕ್ಕಾಗಿ ಕ್ರಮ?

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 19:45 IST
Last Updated 2 ಡಿಸೆಂಬರ್ 2019, 19:45 IST
ವಿಜಯಪುರದಲ್ಲಿ ಕೊಳವೆಬಾವಿಯಿಂದ ಸೋರಿಕೆಯಾಗುತ್ತಿರುವ ಒಂದೊಂದು ಹನಿ ನೀರು ಸಂಗ್ರಹಿಸಲು ಬಿಂದಿಗೆಗಳು ಇಟ್ಟಿರುವುದು
ವಿಜಯಪುರದಲ್ಲಿ ಕೊಳವೆಬಾವಿಯಿಂದ ಸೋರಿಕೆಯಾಗುತ್ತಿರುವ ಒಂದೊಂದು ಹನಿ ನೀರು ಸಂಗ್ರಹಿಸಲು ಬಿಂದಿಗೆಗಳು ಇಟ್ಟಿರುವುದು   

ವಿಜಯಪುರ: ಪಟ್ಟಣದಲ್ಲಿ ಕೊಳವೆ ನೀರಿನ ಸಂಪರ್ಕಕ್ಕೆ ₹ 5,250 ದರ ನಿಗದಿಪಡಿಸಿರುವುದಕ್ಕೆ ಜನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪುರಸಭೆಗೆ ಆದಾಯ ಕ್ರೋಡೀಕರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಬಡ ಮತ್ತು ಮಧ್ಯಮ ವರ್ಗದ ಜನರ ಆದಾಯಮಟ್ಟವೇ ಕೆಳಗಿದೆ. ಹಾಗಾಗಿ ಈ ಮೊತ್ತ ಭರಿಸುವುದು ತುಂಬಾ ಕಷ್ಟ ಎಂದು ಜನ ವಿರೋಧ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ 23 ವಾರ್ಡ್‌ಗಳು ಇವೆ. 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಪಟ್ಟಣಕ್ಕೆ ಹೊರ ಭಾಗದಿಂದ ಸುಮಾರು 5 ಸಾವಿರ ಜನ ಬಂದು ಹೋಗುತ್ತಿದ್ದಾರೆ. ಇಲ್ಲಿ ಕೆಲವು ವಾರ್ಡ್‌ಗಳಿಗೆ ಟ್ಯಾಂಕರ್‌ಗಳಲ್ಲಿ, ಕೆಲ ವಾರ್ಡುಗಳಿಗೆ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದ ಪುರಸಭೆ, ಇತ್ತೀಚೆಗೆ ಖಾಸಗಿ ಟ್ಯಾಂಕರ್‌ಗಳನ್ನು ನಿಲ್ಲಿಸಿ, ಪುರಸಭೆಯ ಟ್ಯಾಂಕರ್‌ಗಳಿಂದಲೇ ನೀರು ಪೂರೈಕೆ ಮಾಡುತ್ತಿದೆ.

ADVERTISEMENT

ಈಗ ಪ್ರತಿ ಕುಟುಂಬವೂ ಕೊಳವೆ ನೀರಿನ ಸಂಪರ್ಕ ಪಡೆಯುವುದನ್ನು ಕಡ್ಡಾಯ ಮಾಡಿದೆ. ಆದಾಯ ಕ್ರೋಡೀಕರಣದ ಹೆಸರಿನಲ್ಲಿ ಬಡವರಿಗೆ ಒತ್ತಾಯ ಪೂರ್ವಕವಾಗಿ ಕೊಳಾಯಿಗಳು ಅಳವಡಿಸಲು ಹೊರಟಿರುವ ಕ್ರಮ ಸರಿಯಲ್ಲ. ಶೇ 60ರಷ್ಟು ಮಂದಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ದಿನಕ್ಕೆ ₹ 200 ಸಂಪಾದನೆ ಮಾಡಿಕೊಂಡು ಜೀವನ ಮಾಡುತ್ತಾರೆ. ಅವರು 5 ಸಾವಿರ ಕಟ್ಟಲು ಅಸಾಧ್ಯ. ಕೊಳವೆಬಾವಿಯಿಂದ ನೀರು ಕೊಡುತ್ತಿರುವವರಿಗೂ ಹಣ ಬಿಡುಗಡೆ ಮಾಡಿಕೊಟ್ಟಿಲ್ಲ ಎಂದರು ಕಾಂಗ್ರೆಸ್‌ ಮುಖಂಡ ಎಂ. ಸತೀಶ್‌ ಕುಮಾರ್‌.

ಮುಖಂಡ ಕನಕರಾಜು ಮಾತನಾಡಿ, ‘ನಮ್ಮ ಭಾಗದಲ್ಲಿ ಅಳವಡಿಸಿರುವ ಸಾರ್ವಜನಿಕ ಕೊಳಾಯಿಗಳಿಂದ 3 ವರ್ಷಗಳಿಂದ ನಾವು ಒಂದು ಹನಿ ನೀರು ಹಿಡಿದಿಲ್ಲ. 9 ಸಾವಿರ ಬಿಲ್ ಕಳುಹಿಸಿದ್ದಾರೆ. ಅಷ್ಟೊಂದು ಹಣ ಒಂದೇ ಬಾರಿಗೆ ಕಟ್ಟಲಿಕ್ಕೆ ಸಾಧ್ಯವೇ? ಪುರಸಭೆಗೆ ಆದಾಯ ಬರಬೇಕು ಎನ್ನುವ ಒಂದೇ ಉದ್ದೇಶಕ್ಕೆ ಬಡವರಿಂದ ವಸೂಲಿ ಮಾಡುವುದು ಸರಿಯೇ? ಶೇ 70ರಷ್ಟು ಮನೆಗಳು ಕಂದಾಯ ಇಲಾಖೆಯಡಿ ಇವೆ. ಕೆಲ ವಾರ್ಡುಗಳಿಗೆ ಏನೂ ಸೌಲಭ್ಯಗಳನ್ನೇ ಕೊಡದೆ ತೆರಿಗೆ ಕಟ್ಟಿ ಎಂದರೆ ಯಾರು ಕಟ್ಟುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ಮಾತನಾಡಿ, ‘ಕೊಳವೆಬಾವಿ ಕೊರೆಯಿಸುವುದು, ಪಂಪು ಮೋಟಾರು ಅಳವಡಿಕೆಗೆ ಮಾತ್ರ ನಮಗೆ ಅನುದಾನ ಸಿಗುತ್ತದೆ. ನಿರ್ವಹಣೆಗೆ ಅನುದಾನ ಬರುವುದಿಲ್ಲ. ಜಲಗಾರರಿಗೆ ಸಂಬಳ ಕೊಡಲಿಕ್ಕೂ ನಮ್ಮಲ್ಲಿ ಹಣ ಇಲ್ಲ, 50 ಲಕ್ಷ ಮನೆ ಇರುವವರೂ ಸಾರ್ವಜನಿಕ ಕೊಳಾಯಿ ಬಳಿಯಿಂದ ಸಂಪುಗಳಿಗೆ ನೀರು ಪಡೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ಒಂದೊಂದು ಸಂಪರ್ಕಕ್ಕೆ ₹ 5,250 ನಿಗದಿ ಮಾಡಿದ್ದೇವೆ. ಬಡವರಿದ್ದರೆ, ಐದು ಮನೆಗಳವರು ಸೇರಿ ಒಂದು ಸಂಪರ್ಕ ಪಡೆದುಕೊಳ್ಳಬಹುದಾಗಿದೆ. ತಿಂಗಳಿಗೆ 80 ರೂಪಾಯಿ ತೆರಿಗೆ ಪಾವತಿ ಮಾಡಬೇಕು. ಸಂಪರ್ಕ ಪಡೆಯುವುದು ಕಡ್ಡಾಯ’ ಎಂದರು.

ಮುಖಂಡ ನರಸಿಂಹಮೂರ್ತಿ ಮಾತನಾಡಿ, ‘ಎಲ್ಲಾ ವಾರ್ಡ್‌ಗಳಲ್ಲೂ ಪೈಪ್‌ಲೈನ್‌ಗಳಿಲ್ಲ. ಈಗ ಕೊಡುತ್ತಿರುವ ನೀರು ವಾರಕ್ಕೊಮ್ಮೆ, ಹತ್ತು ದಿನಗಳಿಗೊಮ್ಮೆ ಕೊಡುತ್ತಾರೆ. ಸಾರ್ವಜನಿಕ ಕೊಳಾಯಿಗಳಿಗೆ ಬರುವ ನೀರನ್ನು ಐದಾರು ಮನೆಗಳವರು ಹಿಡಿಯುತ್ತಾರೆ. ಅದನ್ನು ಬಿಟ್ಟು ಪ್ರತಿ ಮನೆಗೂ ಕೊಳಾಯಿ ಕೊಟ್ಟು ಸಮರ್ಪಕವಾಗಿ ನೀರು ಪೂರೈಕೆ ಮಾಡಲಿಕ್ಕೆ ಕಷ್ಟವಾಗುತ್ತದೆ. ಸಂಪುಗಳಿಗೆ ನೀರು ಕೊಡುವುದರಿಂದ ಉಳ್ಳವರು ಸಂಪುಗಳನ್ನು ದೊಡ್ಡದು ಮಾಡಿಕೊಂಡರೆ, ರೈಸಿಂಗ್ ಪೈಪ್‌ಗಳಿಂದ ಸಂಪರ್ಕ ಪಡೆದುಕೊಂಡರೆ ಇನ್ನುಳಿದವರ ಗತಿಯೇನು? ಈ ಬಗ್ಗೆ ಪುರಸಭೆ ಅಧಿಕಾರಿಗಳು ಚಿಂತಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.