ADVERTISEMENT

ವಿಜಯಪುರ | ನಿಂತ ಮಳೆ: ನಿಲ್ಲದ ಬವಣೆ!

ಪರಿಹಾರ ವಿತರಣೆಗೆ ಸಂತ್ರಸ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 6:10 IST
Last Updated 12 ಸೆಪ್ಟೆಂಬರ್ 2022, 6:10 IST
ಚನ್ನರಾಯಪಟ್ಟಣ ಸರ್ಕಲ್ ನಲ್ಲಿ ಮನೆಯೊಂದು ಕುಸಿದು ಬಿದ್ದಿರುವುದು
ಚನ್ನರಾಯಪಟ್ಟಣ ಸರ್ಕಲ್ ನಲ್ಲಿ ಮನೆಯೊಂದು ಕುಸಿದು ಬಿದ್ದಿರುವುದು   

ವಿಜಯಪುರ (ಬೆಂ.ಗ್ರಾಮಾಂತರ): ಭಾರಿ ಮಳೆ ಮತ್ತು ಎಚ್.ಎನ್.ವ್ಯಾಲಿ ಯೋಜನೆ ಅಡಿ ಕೆರೆಗಳಿಗೆ ನೀರು ಹರಿಸಿದ ಪರಿಣಾಮ ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಹರಿದಿವೆ. ನೂರಾರು ಎಕೆರೆ ಬೆಳೆಗಳು ನೀರುಪಾಲಾಗಿವೆ. ಕೃಷಿ, ತೋಟಗಾರಿಕೆ ಬೆಳೆ, ಹೈನುಗಾರಿಕೆ, ರೇಷ್ಮೆ, ಕುಕ್ಕುಟೋದ್ಯಮ ಸೇರಿದಂತೆ ಹಲವು ಉದ್ಯಮಗಳು ಅಪಾರ ನಷ್ಟ ಅನುಭವಿಸಿವೆ.

ರಾಗಿ, ಜೋಳ, ಅವರೆ, ತೊಗರಿ, ಅಲಸಂದಿ, ಸಾಸಿವೆ ಸೇರಿ ಹಲವು ಬೆಳೆಗಳು ಮುಳುಗಡೆಯಾಗಿವೆ. 156 ಹೆಕ್ಟೇರ್‌ ಪ್ರದೇಶದ ಬೆಳೆ ನಾಶವಾಗಿದೆ. ನೂರಾರು ಮನೆಗಳು ಕುಸಿದಿವೆ. ಬಹಳಷ್ಟು ಮಂದಿ ಆಶ್ರಯ ಕಳೆದುಕೊಂಡಿದ್ದಾರೆ. ಮಳೆಯ ನೀರು ಕೋಳಿ ಫಾರಂಗಳಿಗೆ ನುಗ್ಗಿ ಬಂಡವಾಳ ಹೂಡಿಕೆ ಮಾಡಿದ್ದ ರೈತರು ಮತ್ತು ಉದ್ಯಮಿಗಳು ನಷ್ಟ ಅನುಭವಿಸಿದ್ದಾರೆ.

ಮಳೆಯಿಂದಾಗಿ ಕೆರೆಗಳು ಕೋಡಿ ಹರಿದು ಕೆಲ ಮುಖ್ಯರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ADVERTISEMENT

ಬಾರದ ಜಿಲ್ಲಾ ಉಸ್ತುವಾರಿ ಸಚಿವ: ಕಳೆದ ಒಂದು ವಾರದಿಂದ ಭಾರಿ ಮಳೆಗೆ ಜನಜೀವನ ಅಲ್ಲೋಲ ಕಲ್ಲೋಲವಾಗುತ್ತಿದ್ದರೂ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಾಗಲಿ, ಜಿಲ್ಲಾಧಿಕಾರಿಯಾಗಲಿ, ಜಿಲ್ಲಾ ಮಟ್ಟದ ಅಧಿಕಾರಿಗಳಾಗಲಿ ಇತ್ತ ಸುಳಿದಿಲ್ಲ. ಜನರ ಸಮಸ್ಯೆ ಆಲಿಸಿಲ್ಲ. ಬೆಳೆ ನಷ್ಟ ವೀಕ್ಷಣೆ ಮಾಡಿಲ್ಲ.

ವಿತರಣೆಯಾಗದ ಪರಿಹಾರ: ಕಳೆದ ಬಾರಿ ಬಿದ್ದ ಭಾರಿ ಮಳೆಯಿಂದಾಗಿ ಪಟ್ಟಣದಲ್ಲಿ ಸುಮಾರು 124 ಮನೆಗಳು ನೆಲಕ್ಕುರುಳಿದ್ದು, ಬಿದ್ದಿರುವ ಮನೆಗಳನ್ನು ಎ.ಬಿ.ಸಿ. ವರ್ಗದಲ್ಲಿ ವಿಂಗಡಣೆ ಮಾಡಿ, ದಾಖಲೆ ಸಂಗ್ರಹ ಮಾಡಿ ಕಂದಾಯ ಇಲಾಖೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಿದ್ದರು. 95 ಮನೆಗಳಿಗೆ ಮಾತ್ರ ಪರಿಹಾರ ವಿತರಣೆಯಾಗಿದೆ. ಇನ್ನುಳಿದ ಮನೆಗಳಿಗೆ ಪರಿಹಾರ ವಿತರಣೆಯಾಗಿಲ್ಲ.

‘ಇತ್ತಿಚೆಗೆ ಬಿದ್ದ ಮಳೆಯಿಂದಾಗಿ 20 ಕ್ಕೂ ಹೆಚ್ಚು ಮನೆಗಳು ಕುಸಿದಿವೆ. 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕೆಲವು ಮಂದಿ ಸೂರು ಕಳೆದುಕೊಂಡಿದ್ದೇವೆ. ಇಂತಹವರನ್ನು ಗುರುತಿಸಿ ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಇಂತಹ ಮನೆಗಳಿಗೆ ಶೀಘ್ರವಾಗಿ ಪರಿಹಾರ ವಿತರಣೆ ಮಾಡಬೇಕು’ ಎಂಬುವುದು ಸಂತ್ರಸ್ತರು ಆಗ್ರಹ.

ಒತ್ತುವರಿ ತೆರವುಗೊಳಿಸದೇ ಬೆಳೆ ನಷ್ಟ
ಸಣ್ಣ ನೀರಾವರಿ ಇಲಾಖೆಯಡಿಯಲ್ಲಿರುವ ಕೆರೆಗಳಿಗೆ ಎಚ್.ಎನ್.ವ್ಯಾಲಿ ಯೋಜನೆಯಡಿ ನೀರು ಹರಿಸಲು ಕೆರೆಗಳನ್ನು ಎಚ್.ಎನ್.ವ್ಯಾಲಿ ಯೋಜನೆಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದೆ. ಆದರೆ, ಅಧಿಕಾರಿಗಳು ಕೆರೆಗಳು ಹಾಗೂ ರಾಜಕಾಲುವೆ ಅಳತೆ ಮಾಡಿಸಿ, ಮುಚ್ಚಿಹೋಗಿರುವ ಮತ್ತು ಒತ್ತುವರಿ ತೆರವುಗೊಳಿಸದೇ ನೀರು ಹರಿಸಿದ ಪರಿಣಾಮ ನೀರು ರೈತರ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಮಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.