ADVERTISEMENT

ದೇವನಹಳ್ಳಿ: ಮಳೆಗೆ ಜನ ಜೀವನ ಅಸ್ತವ್ಯಸ್ತ

ತೋಟಗಳಿಗೆ ನುಗ್ಗಿದ ನೀರು: ಫಸಲು ನಷ್ಟ

​ಪ್ರಜಾವಾಣಿ ವಾರ್ತೆ
Published 19 ಮೇ 2025, 15:28 IST
Last Updated 19 ಮೇ 2025, 15:28 IST
ದೇವನಹಳ್ಳಿಯ ಸೂಲಿಬೆಲೆ ರಸ್ತೆಯಲ್ಲಿ ಮಳೆ ನೀರು ನಿಂತಿರುವುದು
ದೇವನಹಳ್ಳಿಯ ಸೂಲಿಬೆಲೆ ರಸ್ತೆಯಲ್ಲಿ ಮಳೆ ನೀರು ನಿಂತಿರುವುದು    

ದೇವನಹಳ್ಳಿ: ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಮತ್ತು ಸೋಮವಾರ ಸುರಿದ ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಎಲ್ಲೆಡೆ ಮಳೆ ನೀರು ತುಂಬಿಕೊಂಡಿದೆ.

ಸೋಮವಾರ ಬೆಳಗಿನ ಜಾವ ಸುರಿದ ಮಳೆಯಿಂದ ತಾಲ್ಲೂಕಿನ ಸಾಕಷ್ಟು ತೋಟಗಳಿಗೆ ನೀರು ನುಗ್ಗಿದ್ದು, ಫಸಲಿಗೆ ಬಂದ ಹೂವು, ತರಕಾರಿ ಸೇರಿ ವಿವಿಧ ಬೆಳೆಗಳು ನಷ್ಟ ಆಗಿವೆ.

ಕಚ್ಚಾ ಮನೆಯಲ್ಲಿರುವ ಬಡವರು, ನಿರ್ಗತಿಕರು ರಾತ್ರಿ ಇಡೀ ಬಿದ್ದ ಮಳೆಯಿಂದ ರಕ್ಷಣೆ ಪಡೆಯಲು ಅಲೆದಾಟ ನಡೆಸಿದರು. 

ADVERTISEMENT

ಪಟ್ಟಣದ ಬಿಬಿ ರಸ್ತೆಯಲ್ಲಿ ಸಿಸಿ ರಸ್ತೆ ಕಾಮಗಾರಿಯಿಂದ  ದೇವನಹಳ್ಳಿ ಹಳೇ ಪಟ್ಟಣದ ಸಂಪರ್ಕ ಕೊಂಡಿ ಬಂದ್ ಮಾಡಿದಂತಾಗಿದೆ. ಇಲ್ಲಿ ಮಳೆ ನೀರು ಸಂಗ್ರಹವಾಗಿ ಜನರು ಓಡಾಡಲು ಸಾಧ್ಯವಾಗುತ್ತಿಲ್ಲ.

ತಾಲ್ಲೂಕು ಕಚೇರಿ ಕಟ್ಟಡದ ನೆಲ ಮಹಡಿಯಲ್ಲಿ ಮಳೆ ನೀರು ಸಂಗ್ರಹವಾಗಿದೆ. ಪಡಸಾಲೆ ಕಚೇರಿಯಲ್ಲಿ ವಿವಿಧ ಪ್ರಮಾಣ ಪತ್ರಗಳು, ಆಧಾರ್‌ ನೋಂದಣಿ, ಸಕಾಲ ಅರ್ಜಿ ಸಲ್ಲಿಸಲು ಮಳೆ ನೀರಿನಲ್ಲಿಯೇ ಜನರು ನಿಂತು, ಸರ್ಕಾರಿ ಸೇವೆ ಪಡೆಯಲು ತೊಂದರೆ ಅನುಭವಿಸಿದರು.

ಬೇಸಿಗೆ ಕಾಲದಲ್ಲಿ ಸ್ಥಳೀಯ ಸಂಸ್ಥೆಗಳು ಮಳೆ ನೀರು ಹರಿಯುವ ಚರಂಡಿ ಸ್ವಚ್ಛ ಮಾಡದ ಹಾಗೂ ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಅನಧಿಕೃತ ಕಟ್ಟಡ ನಿರ್ಮಾಣ ಮಾಡಿರುವ ಪರಿಣಾಮ ಮಳೆ ನೀರು ಇಳಿಜಾರಿನ ಪ್ರದೇಶದಲ್ಲಿ ರಸ್ತೆಯಲ್ಲಿ ಸಂಗ್ರಹವಾಗಿ ಕೆರೆಯಂತಾಗಿದೆ.

ಸೋಮವಾರ ಬೆಳಿಗ್ಗೆ ದಿನಪತ್ರಿಕೆ ವಿತರಣೆ ಮಾಡಲು ಆಗಮಿಸಿದ್ದ, ಪತ್ರಿಕಾ ವಿತರಕರು ಮಳೆಯಿಂದ ಪತ್ರಿಕೆಗಳನ್ನು ಸರಿಯಾದ ಸಮಯಕ್ಕೆ ತಲುಪಿಸಲು ಕಷ್ಟಪಟ್ಟರು.

ಬೀದಿ ಬದಿಯಲ್ಲಿ ಹೂವಿನ ವ್ಯಾಪಾರ, ಹಣ್ಣು ವ್ಯಾಪಾರ ಮಾಡುವವರು, ಚಿಲ್ಲರೆ ಸಗಟು ವ್ಯಾಪಾರಗಾರರು ಮಳೆಯಿಂದ ವ್ಯಾಪಾರ ಇಲ್ಲದೇ ನಷ್ಟ ಅನುಭವಿಸಿದರು.

ದೇವನಹಳ್ಳಿ ತಾಲ್ಲೂಕು ಕಚೇರಿಯ ನೆಲ ಮಹಡಿಯಲ್ಲಿ ಮಳೆ ನೀರು ಸಂಗ್ರಹವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.