ADVERTISEMENT

‘ಹೀಗೇಕೆ’ ಸಿನಿಮಾ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 14:13 IST
Last Updated 9 ಅಕ್ಟೋಬರ್ 2019, 14:13 IST
‘ಹೀಗೇಕೆ’ ಚಲನಚಿತ್ರದ ಮುಹೂರ್ತದಲ್ಲಿ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಆರಂಭ ಫಲಕ ತೋರುವ ಮೂಲಕ ಶುಭ ಹಾರೈಸಿದರು
‘ಹೀಗೇಕೆ’ ಚಲನಚಿತ್ರದ ಮುಹೂರ್ತದಲ್ಲಿ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಆರಂಭ ಫಲಕ ತೋರುವ ಮೂಲಕ ಶುಭ ಹಾರೈಸಿದರು   

ದೊಡ್ಡಬಳ್ಳಾಪುರ: ‘ಯುವ ಪೀಳಿಗೆ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಾಗೆಯೇ ಕಲೆ ಹಾಗೂ ಸಂಸ್ಕೃತಿಯತ್ತ ಆಸಕ್ತಿ ಮೂಡಿಸಿಕೊಳ್ಳಬೇಕು’ ಎಂದು ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಹಾಗೂ ಚಿತ್ರಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಹೇಳಿದರು.

ಇಲ್ಲಿನ ರಂಗಪ್ಪ ವೃತ್ತದ ಬಳಿಯಿರುವ ಸಾಯಿ ಬಾಬಾ ದೇವಾಲಯದಲ್ಲಿ ಸರ್ವಂ ಶುಭಂ ಪಿಕ್ಚರ್ಸ್ ಲಾಂಛನದಲ್ಲಿ ಮೂಡಿ ಬರಲಿರುವ ‘ಹೀಗೇಕೆ’ ಚಲನಚಿತ್ರ ಮುಹೂರ್ತ ಸಮಾರಂಭದಲ್ಲಿ ಚಿತ್ರಕ್ಕೆ ಆರಂಭ ಫಲಕ ತೋರುವ ಮೂಲಕ ಶುಭ ಹಾರೈಸಿ ಮಾತನಾಡಿದರು.

‘ಚಿತ್ರ ನಿರ್ಮಾಪಕರಾಗಿ ಹೆಸರು ಮಾಡಿರುವ ಕೆ.ಸಿ.ಎನ್.ಗೌಡ ಮತ್ತು ಸಹೋದರರು ದೊಡ್ಡಬಳ್ಳಾಪುರದವರೇ ಆಗಿದ್ದು, ಇಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ಚಿತ್ರ ನಿರ್ದೇಶಕ ಚಂದ್ರಶೇಖರ್ ಸಹ ಇಲ್ಲಿನ ಪ್ರತಿಭೆಯೇ ಆಗಿದ್ದಾರೆ. ನನ್ನ ‘ವಿನಾಯಕ ಗೆಳೆಯರ ಬಳಗ’ ಚಿತ್ರವನ್ನು ಬಹುಪಾಲು ದೊಡ್ಡಬಳ್ಳಾಪುರದಲ್ಲಿಯೇ ಚಿತ್ರೀಕರಣ ಮಾಡಿದ್ದೆ’ ಎಂದು ದೊಡ್ಡಬಳ್ಳಾಪುರದ ಒಡನಾಟವನ್ನು ಸ್ಮರಿಸಿದ ಅವರು, ಚಿತ್ರರಂಗದಲ್ಲಿ ಹೊಸ ಪ್ರಯೋಗಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ADVERTISEMENT

ಸಂಕಲನಕಾರ ಹಾಗೂ ನಿರ್ದೇಶಕ ಎಸ್.ಕೆ.ನಾಗೇಂದ್ರ ಅರಸ್ ಮಾತನಾಡಿ, ‘ಚಿತ್ರರಂಗದಲ್ಲಿ ಹಿರಿಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತಿನಲ್ಲಿ ಹುರುಳಿಲ್ಲ. ಆದರೆ ಸಂದರ್ಭಾನುಸಾರ ಬದಲಾವಣೆಗಳಿಗೆ ಒಳಪಡಬೇಕಿದೆ. ಜನಸಾಮಾನ್ಯರು ಇಂದಿಗೂ ಹಿರಿಯ ಕಲಾವಿದರಿಗೆ ಮನ್ನಣೆ ನೀಡುತ್ತಿದ್ದಾರೆ. ನನ್ನನ್ನು ಸುಂದರ ಕೃಷ್ಣ ಅರಸ್ ಅವರ ಮಗನೆಂದು ಗುರುತಿಸುವುದು ಸಂತಸ ತಂದಿದೆ’ ಎಂದರು.

‘ಹೀಗೇಕೆ’ ಚಿತ್ರದ ನಿರ್ದೇಶಕ ಚಂದ್ರಶೇಖರ್ ಮಾವಿನಕುಂಟೆ ಮಾತನಾಡಿ, ‘ಕೆಲ ಪೂರ್ವಾಗ್ರಹದಿಂದ ವ್ಯಕ್ತಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಚಿತ್ರದ ನಾಯಕ ಹೋರಾಟ ನಡೆಸುತ್ತಾನೆ. ಬದಲಾವಣೆ ತರಬೇಕೆನ್ನುವ ಆಶಯ ಹೊಂದಿರುವ ನಾಯಕನಿಗೆ ಎದುರಾಗುವ ಸವಾಲುಗಳ ಬಗ್ಗೆ ಚಿತ್ರದ ವಿಷಯ ಅಡಗಿದೆ’ ಎಂದರು.

ಫ್ಯಾಷನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಶೀಲಾ ಯೋಗೇಶ್ವರ್, ಚಿತ್ರ ನಿರ್ಮಾಪಕ ವಿ.ಕರಿಸುಬ್ಬು, ನಟ ಆರ್.ಡಿ.ಅನಿಲ್‌ ಕೌದೇನಹಳ್ಳಿ, ಚಿತ್ರದ ನಾಯಕ ನಟ ಪ್ರಣವ್, ವಕೀಲ ರವಿ ಮಾವಿನಕುಂಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.