ADVERTISEMENT

ಗರ್ಭಿಣಿಗೆ ಎಚ್‌ಐವಿ ಸೋಂಕು ಪರೀಕ್ಷೆ ಕಡ್ಡಾಯ: ಡಾ.ಉದಯ್ ಕುಮಾರ್

ತಾಯಿಯಿಂದ ಮಗುವಿಗೆ ಸೋಂಕು ಹರಡುವಿಕೆ ನಿಯಂತ್ರಣ ಅಭಿಯಾನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 2:42 IST
Last Updated 10 ಮಾರ್ಚ್ 2022, 2:42 IST
ವಿಜಯಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಆಯೋಜಿಸಿದ್ದ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡುವಿಕೆ ನಿಯಂತ್ರಣ ಅಭಿಯಾನದಲ್ಲಿ ಗರ್ಭಿಣಿಯರಿಗೆ ಬಾಗಿನ ನೀಡಲಾಯಿತು
ವಿಜಯಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಆಯೋಜಿಸಿದ್ದ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡುವಿಕೆ ನಿಯಂತ್ರಣ ಅಭಿಯಾನದಲ್ಲಿ ಗರ್ಭಿಣಿಯರಿಗೆ ಬಾಗಿನ ನೀಡಲಾಯಿತು   

ವಿಜಯಪುರ: ಎಚ್‌ಐವಿ ಸೋಂಕು ಜಾಗತಿಕ ಆರೋಗ್ಯ ಸಮಸ್ಯೆಯಾಗಿದೆ. ಇದು ಸಮಸ್ಯೆಯಾಗಿಯೇ ಮುಂದುವರಿದಿದೆ. ವಿಶ್ವದಾದ್ಯಂತ 38 ದಶಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದಾರೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಉದಯ್ ಕುಮಾರ್ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣಾ ಮತ್ತು ತಡೆಗಟ್ಟುವಿಕೆ ಘಟಕದಿಂದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡುವಿಕೆ ನಿಯಂತ್ರಣ ಅಭಿಯಾನದಲ್ಲಿ ಅವರು ಮಾತನಾಡಿದರು.

ವಿವಿಧ ಸಂಘಗಳು, ಸರ್ಕಾರ, ಎನ್‌ಜಿಒಗಳು ಹಾಗೂ ಆರೋಗ್ಯ ಕೇಂದ್ರಗಳು ಸೋಂಕು ತಡೆಗಟ್ಟಲು, ರೋಗ ಪತ್ತೆ ಮಾಡಲು ಮತ್ತು ಚಿಕಿತ್ಸೆ ನೀಡಲು ಶ್ರಮಿಸುತ್ತಿವೆ ಎಂದರು.

ADVERTISEMENT

ಎಚ್ಐವಿ ಸೋಂಕು ಬಾಧಿತ ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇದು ಅನೇಕ ಸೋಂಕುಗಳು ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇದರಿಂದ ರೋಗ ನಿರೋಧಕ ಕೊರತೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಗರ್ಭಿಣಿ ಹಾಗೂ ಅವರ ಪತಿ ಸಂಕೋಚಪಡದೆ ಆರೋಗ್ಯವಂತ ಮಗುವಿನ ಜನನಕ್ಕಾಗಿ ಕಡ್ಡಾಯವಾಗಿ ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಸುಮಾ ಮಾತನಾಡಿ, ಮಹಿಳೆಯರಲ್ಲಿ ಎಚ್ಐವಿ ಸೋಂಕನ್ನು ಪ್ರಾಥಮಿಕ ಹಂತದಲ್ಲೇ ತಡೆಗಟ್ಟುವಿಕೆಯು ಬಹಳ ಮುಖ್ಯ. ಸೋಂಕು ಹೇಗೆ ಹರಡುತ್ತದೆ ಎನ್ನುವ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸುರಕ್ಷಿತ ಲೈಂಗಿಕ ಸಂಪರ್ಕದಿಂದ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ.ಗರ್ಭಾವಸ್ಥೆ, ಪ್ರಸವ ಮತ್ತು ಹಾಲುಣಿಸುವಿಕೆ ಅವಧಿಯಲ್ಲಿ ತಾಯಿಯಿಂದ ಮಗುವಿಗೆ ವರ್ಗಾವಣೆಯಾಗುವುದನ್ನು ತಡೆಯುವುದು, ಜೊತೆಗೆ ವೈರಸ್ ಲೋಡ್ ಮತ್ತು ಸಿಡಿ4 ಎಣಿಕೆಯನ್ನು ಗರ್ಭಾವಸ್ಥೆಯಲ್ಲಿ ಗಮನಿಸುವುದರಿಂದ ಈ ಅಪಾಯವನ್ನು ನಿರ್ಧರಿಸಲು ನೆರವಾಗುತ್ತದೆ ಎಂದರು.

ವೈರಲ್ ಲೋಡ್ ಕಂಡುಬಂದರೆ ಸಿಸೇರಿಯನ್ ಹೆರಿಗೆ ಮಾಡಬೇಕಾಗುತ್ತದೆ. ಆದ್ದರಿಂದ ಆರೋಗ್ಯ ಇಲಾಖೆಯಿಂದ ನೀಡುವಂತಹ ನಿರ್ದೇಶನ ಹಾಗೂ ಸಲಹೆಗಳನ್ನು ಗರ್ಭಿಣಿಯರು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.

40 ಗರ್ಭಿಣಿಯರಿಗೆ ಬಾಗಿನ ನೀಡಲಾಯಿತು. ಡಾ.ಕರ್ಪೂಗಂ, ಡಾ.ಸುನೀತಾ, ಡಾ.ಸ್ವರೂಪ್, ಆಪ್ತ ಸಮಾಲೋಚಕಿ ರೇಖಾ, ಕುಮುದಾ, ಕಲಾವತಿ, ವರಲಕ್ಷ್ಮಮ್ಮ, ವೀರೇಶ್, ಲಲಿತಮ್ಮ, ರಾಜೇಶ್ವರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.