ಹೊಸಕೋಟೆ: ಇಪ್ಪತ್ತು ವರ್ಷಗಳ ಹಿಂದೆ ಸರ್ಕಾರ ಮನ್ನಾ ಮಾಡಿದ್ದ ಸಾಲವನ್ನು ಮರು ಪಾವತಿಸುವಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಇದೀಗ ನಂದಗುಡಿ ಹೋಬಳಿಯ ಹಲವು ಗ್ರಾಮಸ್ಥರು ಹಾಗೂ ಮಹಿಳೆಯರಿಗೆ ನ್ಯಾಯಾಲಯದ ಮೂಲಕ ನೋಟಿಸ್ ಜಾರಿ ಮಾಡಿದೆ.
ಇದನ್ನು ಪ್ರತಿಭಟಿಸಿ ನಂದಗುಡಿ ಹೋಬಳಿಯ ಚೀಮಸಂದ್ರ, ತರಬಹಳ್ಳಿ, ಬನಹಳ್ಳಿ ನೆಲವಾಗಿಲು, ಬಳೆಚೌಡಪ್ಪನಹಳ್ಳಿ, ಬಾವಾಪುರ, ಇಟ್ಟಸಂದ್ರ ಸೇರಿದಂತೆ ಹಲವಾರು ಗ್ರಾಮಗಳ ಜನರು ಮಂಗಳವಾರ ತಾಲ್ಲೂಕಿನ ಮಲ್ಲಿಮಾಕನಪುರದ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
2005 ರಿಂದ 2010ರವರೆಗೆ ಅಂದಿನ ಸ್ತ್ರೀಶಕ್ತಿ ಸಂಘಗಳಿಗೆ ನೀಡಿದ್ದ ₹1 ಲಕ್ಷದಿಂದ ₹1.50 ಲಕ್ಷ ಸಾಲವನ್ನು 2013ರಲ್ಲಿ ಅಂದಿನ ಸರ್ಕಾರ ಮನ್ನಾ ಮಾಡಿತ್ತು. ಆ ಸಾಲವನ್ನು ಕಟ್ಟುವಂತೆ ಬ್ಯಾಂಕ್ ಈಗ ನೋಟಿಸ್ ನೀಡಿದೆ. ಈ ನೋಟಿಸ್ ಕುರಿತು ಸೂಕ್ತ ಸಮಜಾಯಿಷಿ ನೀಡುವಂತೆ ಪ್ರತಿಭಟನಕಾರು ಒತ್ತಾಯಿಸಿದರು.
ಮಲ್ಲಿಮಕನಾಪುರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಂದಗುಡಿ ಹೋಬಳಿಯ ಹಲವು ಗ್ರಾಮಗಳ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಿತ್ತು. ರೈತರ ಸಾಲದೊಂದಿಗೆ ಈ ಸಾಲಗಳನ್ನು 2013ರಲ್ಲಿ ಅಂದಿನ ಸರ್ಕಾರ ಮನ್ನಾ ಮಾಡಿರುವದಾಗಿ ಘೋಷಣೆ ಮಾಡಿತ್ತು. ಆಗ ಬ್ಯಾಂಕ್ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಸಾಲಮನ್ನಾ ಕಾಗದ ಪತ್ರಗಳಿಗೆ ಸಹಿ ಪಡೆದು ಹೋಗಿದ್ದರು.
ಆ ನಂತರ ಯಾವುದೇ ರೀತಿಯ ಸಾಲ ಮರುಪಾವತಿ ಮಾಡಿಲ್ಲ. ಬ್ಯಾಂಕ್ ಕೂಡ ಪಾವತಿಸಲು ಕೇಳಿರಲಿಲ್ಲ. ಈಗ ಏಕಾಏಕಿ ಲಕ್ಷ, ಲಕ್ಷ ಹಣ ಕಟ್ಟುವಂತೆ ಕೋರ್ಟ್ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
20 ವರ್ಷಗಳಲ್ಲಿ ಕೆಲವರು ಮದುವೆಯಾಗಿ ಹೋಗಿದ್ದಾರೆ. ಮತ್ತೆ ಕೆಲವರು ಮರಣ ಹೊಂದಿದ್ದಾರೆ. ಕೆಲವರು ಊರು ಖಾಲಿ ಮಾಡಿದ್ದಾರೆ. ಕೆಲವರಿಗೆ ವಯಸ್ಸಾಗಿದ್ದರೆ, ಇನ್ನೂ ಕೆಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೆಚ್ಚಿನವರಿಗೆ ಸಾಲ ಮರು ಪಾವತಿಸುವ ಶಕ್ತಿ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಸಾಲ ಮನ್ನಾ ಆಗಿ ಎರಡು ದಶಕ ಕಳೆದಿದೆ. ನಿರುಮ್ಮಳವಾಗಿ ಜೀವನ ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಈ ರೀತಿಯ ನೋಟಿಸ್ ನೀಡಿರುವುದು ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳನ್ನು ದಂಗುಬಡಿಯುವಂತೆ ಮಾಡಿದೆ. ಈ ಕುರಿತು ಸಂಬಂಧಿಸಿದ ಸರ್ಕಾರ ಸೂಕ್ತ ತನಿಖೆ ನಡೆಸಿ ಅನ್ಯಾಯ ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.