ADVERTISEMENT

ಕಾರ್ಮಿಕ ಸಂಹಿತೆ ವಿರೋಧ: ಹೊಸಕೋಟೆ ಬಂದ್‌ ಯಶಸ್ವಿ

ಎಲ್ಲೆಡೆ ರಾಜಾಜಿಸಿದ ಕೆಂಬಾವು । ಪ್ರತಿಭಟನಾ ಮೆರವಣಿಗೆ । ಹೋರಾಟಗಾರರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:33 IST
Last Updated 13 ಫೆಬ್ರುವರಿ 2026, 6:33 IST
ಹೊಸಕೋಟೆ ಹೂಮಂಡಿ ಸರ್ಕಲ್‌ನಲ್ಲಿ ಬಂದ್ ಬೆಂಬಲಿಸಿದ ನಡೆದ ಪ್ರತಿಭಟನಾ ಮೆರವಣಿಗೆ
ಹೊಸಕೋಟೆ ಹೂಮಂಡಿ ಸರ್ಕಲ್‌ನಲ್ಲಿ ಬಂದ್ ಬೆಂಬಲಿಸಿದ ನಡೆದ ಪ್ರತಿಭಟನಾ ಮೆರವಣಿಗೆ   

ಹೊಸಕೋಟೆ: ನಾಲ್ಕು ಕಾರ್ಮಿಕ ಸಂಹಿತೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರ ಭಾಗವಾಗಿ ನಡೆದ ಬಂದ್‌ ತಾಲ್ಲೂಕಿನಲ್ಲಿ ಯಶಸ್ವಿಯಾಯಿತು.

ಮೆಡಿಕಲ್‌, ಹಾಲು, ಶಾಲೆ–ಕಾಲೇಜು, ಸಾರ್ವಜನಿಕ ಸೇವೆ ಸೇರಿಂತೆ ತುರ್ತು ಸೇವೆ ಹೊರತುಪಡಿಸಿ, ಎಲ್ಲ ಮಳಿಗೆಗಳು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿದ್ದರು. ಎಲ್ಲೆಡೆ ಕೆಂಬಾವುಟ ರಾಜಾಜಿಸಿತು. ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿದರು.

ಬಸವೇಶ್ವರ ಸರ್ಕಲ್ ಬಳಿ ರಸ್ತೆ ತಡೆ ನಡೆಸಿದ ಹೋರಾಟರರನ್ನು ಪೊಲೀಸರು ಬಂಧಿಸಿ, ಠಾಣೆಗೆ ಕರೆದೊಯ್ದು ಸಂಜೆ ಬಿಡುಗಡೆ ಮಾಡಿದರು.

ADVERTISEMENT

ಸಿಐಟಿಯು ನೇತೃತ್ವದಲ್ಲಿ ಇಂಡೋ ಮೀಮ್ ಎಂಪ್ಲಾಯ್ ಯೂನಿಯನ್, ಆಟೋಲಿವ್, ಇಂಡಿಯಾ ಎಂಪ್ಲಾಯಿಸ್, ಗುಡ್ ರಿಚ್ ಏರೋಸ್ಪೇಸ್ ಸರ್ವಿಸ್ ಎಂಪ್ಲಾಯಿಸ್ ಯೂನಿಯನ್, ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಎಂಪ್ಲಾಯಿಸ್ ಯೂನಿಯನ್, ಎಂಐಇಯು ಹಾಗೂ ದಲಿತಪರ, ಕನ್ನಡಪರ, ಪ್ರಗತಿಪರ, ರೈತಪರ ಮೊದಲಾದ ಸಂಘಟನೆಗಳು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ನಗರದಲ್ಲಿ ಬಂದ್ ನಡೆಸಿದವು.

ನಗರದ ತಾಲ್ಲೂಕು ಕಾರ್ಯಾಲಯದಿಂದ ಕೆಇಬಿ ಸರ್ಕಲ್, ಗಂಗಮ್ಮಗುಡಿ ರಸ್ತೆ, ಓಂಶ್ರೀ ಸರ್ಕಲ್, ಸ್ವಾಮಿ ವಿವೇಕಾನಂದ ರಸ್ತೆ, ಮೋರ್ ಸರ್ಕಲ್, ಕುರುಬರ ಪೇಟೆ, ಹಳೆ ಮಾರುಕಟ್ಟೆ ರಸ್ತೆಗಳಲ್ಲಿ ಸಿಐಟಿಯು, ವಿವಿಧ ಸಂಘಟನೆಗಳಿಂದ ಹಾಗೂ ಕಾರ್ಮಿಕರು, ರೈತರು ಮೆರವಣಿಗೆ ನಡೆಸಿದರು. ಶೇ 80 ರಷ್ಟು ಮಳಿಗೆಗಳು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು.  ಕೆಲವು ಅಂಗಡಿಗಳ ಮಾಲೀಕರು ನಮಗೂ ಹೊರಾಟಕ್ಕೂ ಯಾವುದೇ ಸಂಬಂದ ಇಲ್ಲ ಎಂದು ನಿರಾಸಕ್ತಿ ಪ್ರದರ್ಶಿಸಿದರು.

ಹೊಸಕೋಟೆ ತಾಲ್ಲೂಕು ಕಚೇರಿ ಮುಂಭಾಗ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳು ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಭೀಮ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಾಣ್, ಅಖಿಲ ಭಾರತ ವಕೀಲರ ಸಂಫದ ನಾಗರಾಜ್, ದಸಂಸ ಅಂಬೇಡ್ಕರ್ ವಾದದ ತಾಲ್ಲೂಕು ಅಧ್ಯಕ್ಷ ಚಿನ್ನಸ್ವಾಮಿ, ದಲಿತ ಹಕ್ಕುಗಳ ಹೋರಾಟ ಸಮಿತಿಯ ತಾಲ್ಲೂಕು ಕಾರ್ಯದರ್ಶಿ ಎಂ. ಮುನಿರಾಜು, ರಾಜ್ಯ ರೈತ ಸಂಘ ತಾಲ್ಲೂಕು ಅಧ್ಯಕ್ಷ  ಹೈದರ್ ಬೇಗ್, ಆಮ್ ಆದ್ಮಿ ಪಕ್ಷದ ಸಮೀರ್ ಇದ್ದರು.

ಹೊಸಕೋಟೆಯಲ್ಲಿ ಹೋರಾಟಕ್ಕೆ ಪೊಲೀಸರ ಪಹರೆ
ಹೊಸಕೋಟೆ ತಾಲ್ಲೂಕು ಕಚೇರಿ ಮುಂಭಾಗ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳು ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು

ಕಾರ್ಮಿಕರ ಬದುಕಿಗೆ ಕೊಳ್ಳಿ ಕಾರ್ಮಿಕನಿಂದ ದೇಶದ ಜಿಡಿಪಿ ದುಪ್ಪಟ್ಟಾಗಿದೆ. ಆದರೆ ಕಾರ್ಮಿಕರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಈ ಹಿಂದೆ ಇದ್ದ 29 ಕಾನೂನುಗಳನ್ನು 4 ಕಾನೂನು ಸಂಹಿತೆಗಳ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಾರ್ಮಿಕರ ಬದುಕಿಗೆ ಕೊಳ್ಳಿ ಇಡುತ್ತಿದೆ ಎಂದು ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಆನಂದ್ ದೂರಿದರು. ಅಮೆರಿಕ ರೈತರು ಬೆಳೆದ 50ಕ್ಕೂ ಹೆಚ್ಚು ಬೆಳೆಗಳನ್ನು ದೇಶದಲ್ಲಿ ಮಾರಾಟ ಮಾಡಲು ತೆರಿಗೆ ವಿನಾಯಿತಿ ನೀಡಿ ನಮ್ಮ ರೈತರ ಬೆಳೆಯನ್ನು ಅದೇ ಅಮೆರಿಕದಲ್ಲಿ ಮಾರಾಟ ಮಾಡಲು ಶೇ 18 ರಷ್ಟು ತೆರಿಗೆ ಕಟ್ಟುವ ದುಸ್ಥಿತಿ ಬಂದಿದೆ ಎಂದು ಬೇಸರಿಸಿದರು. ಸಿಐಟಿಯು ತಾಲ್ಲೂಕು ಅಧ್ಯಕ್ಷ ಹರಿಂದ್ರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.