ADVERTISEMENT

5 ವರ್ಷದ ಶಾಶ್ವತ ಕರಡು ಯೋಜನೆ ಸಿದ್ಧಪಡಿಸಿ: ಅಧಿಕಾರಿಗಳಿಗೆ ಶರತ್ ಬಚ್ಚೇಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:57 IST
Last Updated 19 ಫೆಬ್ರುವರಿ 2026, 4:57 IST
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಕರಡು ಅಭಿವೃದ್ದಿ ಯೋಜನೆ ಪ್ರಕತಿ ಪರಿಶೀಲಾನಾ ಸಭೆಯಲ್ಲಿ ಶಾಸಕ ಶರತ್ ಬಚ್ಚೆಗೌಡ ಅಧಿಕಾರಿಗಳಿಂದಿಗೆ ಚರ್ಚೆ ನೆಡೆಸಿದ ಸಂದರ್ಭ
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಕರಡು ಅಭಿವೃದ್ದಿ ಯೋಜನೆ ಪ್ರಕತಿ ಪರಿಶೀಲಾನಾ ಸಭೆಯಲ್ಲಿ ಶಾಸಕ ಶರತ್ ಬಚ್ಚೆಗೌಡ ಅಧಿಕಾರಿಗಳಿಂದಿಗೆ ಚರ್ಚೆ ನೆಡೆಸಿದ ಸಂದರ್ಭ   

ಹೊಸಕೋಟೆ: ಮುಂದಿನ ಎರಡು ವರ್ಷಗಳ ನೀಲ ನಕ್ಷೆಗೆ ಬದಲಿಯಾಗಿ ಐದು ವರ್ಷಕ್ಕೂ ಮೀರಿ ನಗರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೂಲ ಸೌಕರ್ಯಕ್ಕೆ ಬೇಕಾದ ಕರಡು ಅಭಿವೃದ್ಧಿ ಯೋಜನೆಯಡಿ ಬೇಡಿಕೆ ಪಟ್ಟಿ ಸಿದ್ದಪಡಿಸಬೇಕೆಂದು ವಿವಿಧ ಇಲಾಖೆಗಳಿಗೆ ಶಾಸಕ ಶರತ್ ಬಚ್ಚೇಗೌಡ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ನಡೆದ ಕರಡು ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ವೇಗವಾಗಿ ಬೆಳೆಯುತ್ತಿರುವ ತಾಲ್ಲೂಕನ್ನು ಮಾದರಿಯಾಗಿಸುವ ಆಶಯವಿದೆ. ಆದ್ದರಿಂದ ಪಂಚಾಯಿತಿಗಳು ಕೇವಲ ನೀರು, ಮೋರಿ, ರಸ್ತೆ, ಬೀದಿ ದೀಪಗಳಂತಹ ಮೂಲ ಸೌಕರ್ಯ ಕಲ್ಪಿಸಬೇಕು. ಶಾಶ್ವತ ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ನಿರ್ದೇಶಿಸಿದರು.

ADVERTISEMENT

ಕುಸುಮ್ ಯೋಜನೆಯಡಿ ಎಲ್ಲಾ ಸರ್ಕಾರಿ ಕಚೇರಿ, ಶಾಲಾ–ಕಾಲೇಜು, ಸರ್ಕಾರಿ ಗೋಮಾಳ, ಕೆರೆಯಂಗಳ ಮೊದಲಾದೆಡೆ ಸೋಲಾರ್ ವಿದ್ಯುತ್ ಉತ್ಪಾದನೆಗೆ ಉತ್ತೇಜನೆ, ಮಳೆ ನೀರು ಸಂಗ್ರಹ, ನಗರದ ವ್ಯಾಪ್ತಿಯಲ್ಲಿ 24 ಗಂಟೆ ವಿದ್ಯುತ್, ನಗರಕ್ಕೆ ಕಾವೇರಿ ನೀರು, ನೂತನ ಉದ್ಯಾನ ನಿರ್ಮಾಣ, ಸಮರ್ಪಕ ರೀತಿಯ ಬೀದಿ ದೀಪ ನಿರ್ವಹಣೆ, ನೈರ್ಮಲ್ಯ ಕಾಪಾಡುವುದು, ಕೃಷಿ ಸಂಬಂದ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡಬೇಕಿದೆ ಎಂದರು.

ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ, ರಾಸುಗಳ ಫಾರಂ ಸ್ಥಾಪನೆ, ಬ್ರೀಡಿಂಗ್ ಕೇಂದ್ರಗಳ ಬೇಡಿಕೆ, ಮ್ಯಾಗ್ನೆಟ್ ಶಾಲೆ ಸ್ಥಾಪನೆಗೆ ಬೇಕಾದ ಕೆಪಿಎಸ್ ಮಾನದಂಡ ಅಳವಡಿಕೆಗೆ ಸಂಪನ್ಮೂಲ ಕ್ರೂಡಿಕರಣ, ಪ್ರಜಾ ಸೌಧ, ನಾಡಕಚೇರಿಗಳ ನಿರ್ಮಾಣ, ಹೀಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮುಂದಿನ ಐದು ವರ್ಷಕ್ಕೂ ಮೀರಿ ತಾಲ್ಲೂಕಿಗೆ ಬೇಕಾಗುವ ಸೌಲಭ್ಯಗಳನ್ನು ಪ್ರತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಿಂದ ಎಲ್ಲಾ ಸರ್ಕಾರಿ ಅಧಿಕಾರಿಗಳು ಕರಡು ಪ್ರತಿಯನ್ನು ತಯಾರಿಸಿ ಮುಂದಿನ ಸೋಮವಾರದೊಳಗೆ ಸಲ್ಲಿಸಬೇಕಿದೆ ಎಂದು ಸೂಚಿಸಿದರು.

ತಾಲ್ಲೂಕು ಪಂಚಾಯತಿ ಇಒ, ಮುನಿಯಪ್ಪ, ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

ತಾಲ್ಲೂಕಿನ ಅಭಿವೃದ್ಧಿಗೆ ಸದ್ಯ ₹3 ಸಾವಿರ ಕೋಟಿಯಷ್ಟು ಅನುದಾನ ಅಗತ್ಯತೆ ಇದೆ. ಈ ಸಂಬಂದ ಮುಂದಿನ ದಿನಗಳಲ್ಲಿ ಕರಡು ಪ್ರತಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಹಂತ ಹಂತವಾಗಿ ಅನುದಾನ ಬಂದರೂ ಅಭಿವೃದ್ಧಿ ಕೆಲಸಗಳಿಗೆ ಬಳಸಲು ನೆರವಾಗುತ್ತದೆ
ಶರತ್ ಬಚ್ಚೇಗೌಡ, ಶಾಸಕ
ಡಿಪೊ ಸ್ಥಾಪನೆಗೆ ಕ್ರಮ
ಗ್ರಾಮಗಳಿಗೆ ಸಾರಿಗೆ ಕಲ್ಪಿಸಲು ಈಗಾಗಲೆ ಎರಡು ಇಲೆಕ್ಟ್ರಿಕ್ ಬಸ್ ಅನ್ನು ಸರ್ಕಾರ ಮಂಜೂರು ಮಾಡಿದೆ. ನಂದಗುಡಿ ಹಾಗೂ ಅನುಗೊಂಡನಹಳ್ಳಿ ಭಾಗದಲ್ಲಿ ಒಂದು ಘಟಕ ಸ್ಥಾಪನೆಗೆ ಕನಿಷ್ಠ 5 ಎಕರೆ ಸರ್ಕಾರಿ ಜಾಗದ ಅವಶ್ಯಕತೆ ಇದ್ದು ಕಂದಾಯ ಇಲಾಖೆಗೆ ಗಮನಕ್ಕೆ ತರಲಾಗುವುದು ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.