ಹೊಸಕೋಟೆ: ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ದೊಡ್ಡ ನಲ್ಲಾಲ ಗ್ರಾಮದ ತೋಟವೊಂದರಲ್ಲಿ ಕಟಾವಿಗೆ ಬಂದಿದ್ದ ಒಂದು ಎಕರೆಯಷ್ಟು ಟೊಮೆಟೊ ಬೆಳೆಯನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ನಾಶಪಡಿಸಿದ್ದಾರೆ.
ಬಸವರಾಜಪ್ಪ ಎಂಬುವರ ತೋಟದಲ್ಲಿ ಕಟಾವಿಗೆ ಬಂದಿದ್ದ ಟೊಮೆಟೊ ಬೆಳೆಗೆ ಆಸರೆಯಾಗಿ ನಿಲ್ಲಿಸಿದ್ದ ಕಡ್ಡಿ ಮತ್ತು ತಂತಿಯನ್ನು ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದಾರೆ. ಇದರಿಂದ ಕಟಾವಿಗೆ ಬಂದಿದ್ದ ಒಂದು ಎಕೆರೆ ಟೊಮೆಟೊ ಗಿಡ ನೆಲಕ್ಕುರುಳಿದ್ದು, ಹಣ್ಣು, ಕಾಯಿ ಉದುರಿ ಹೋಗಿವೆ.
‘ಹಳೆಯ ರಾಜಕೀಯ ವೈಷಮ್ಯದಿಂದ ಗ್ರಾಮದ ಪರಿಚಿತರೇ ಈ ಕೃತ್ಯ ಎಸಗಿದ್ದಾರೆ. ಬೆಳೆದು ನಿಂತಿದ್ದ ಟೊಮೆಟೊ ಬೆಳೆ ನೆಲಕ್ಕೆ ಉರುಳಿದ್ದು ಸುಮಾರು ₹3 ಲಕ್ಷ ಬಂಡವಾಳ, ಸುಮಾರು ₹8–₹10 ಲಕ್ಷ ಆದಾಯ ನಷ್ಟವಾಗಿದೆ’ ಎಂದು ರೈತ ಬಸವರಾಜಪ್ಪ ತಿಳಿಸಿದ್ದಾರೆ.
‘ಸ್ಯಾಂಪಲ್ ಟೊಮೆಟೊ ಕೀಳಲು ಸಿದ್ಧವಾಗಿದ್ದೆ. ಮಂಗಳವಾರ ರಾತ್ರಿ ತೋಟಕ್ಕೆ ನುಗ್ಗಿರುವ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.