ADVERTISEMENT

‘ಕಿರುಚಿತ್ರ ಮೂಲಕ ಸಮಾಜ ಸುಧಾರಿಸಲಿ’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 14:44 IST
Last Updated 15 ಸೆಪ್ಟೆಂಬರ್ 2019, 14:44 IST
ವಿಜಯಪುರ ಬಳಿಯ ಚೌಡಪ್ಪನಹಳ್ಳಿ ಬುದ್ಧವಿಹಾರದಲ್ಲಿ ನಡೆದ ಕಿರುಚಿತ್ರ ನಿರ್ಮಾಣಕ್ಕೆ ನಳಂದಾ ಇಂಟರ್‌ನ್ಯಾಷನಲ್ ಶಾಲೆಯ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಚಾಲನೆ ನೀಡಿದರು 
ವಿಜಯಪುರ ಬಳಿಯ ಚೌಡಪ್ಪನಹಳ್ಳಿ ಬುದ್ಧವಿಹಾರದಲ್ಲಿ ನಡೆದ ಕಿರುಚಿತ್ರ ನಿರ್ಮಾಣಕ್ಕೆ ನಳಂದಾ ಇಂಟರ್‌ನ್ಯಾಷನಲ್ ಶಾಲೆಯ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಚಾಲನೆ ನೀಡಿದರು    

ವಿಜಯಪುರ: ಸಮಾಜದಲ್ಲಿನ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ, ಕುಡಿಯುವ ನೀರಿಗೆ ಹಾಹಾಕಾರ ಸೇರಿದಂತೆ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗುವಂತಹ ಚಿಂತನೆಗಳನ್ನು ಕಿರುಚಿತ್ರಗಳ ಮೂಲಕ ಪ್ರದರ್ಶಿಸಬೇಕು ಎಂದು ನಳಂದಾ ಇಂಟರ್‌ನ್ಯಾಷನಲ್ ಶಾಲೆಯ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಹೇಳಿದರು.

ಸಮೀಪದ ಚೌಡಪ್ಪನಹಳ್ಳಿ ಬುದ್ಧವಿಹಾರದಲ್ಲಿ ನಳಂದಾ ಪ್ರೊಡಕ್ಷನ್ ಅಡಿಯಲ್ಲಿ ‘ಜೋಡಿಹಕ್ಕಿ’ ಎಂಬ ಕಿರುಚಿತ್ರಕ್ಕೆ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿ ಮೂಡಿಬಂದಂತಹ ಬಹಳಷ್ಟು ಚಲನಚಿತ್ರಗಳು, ಜನರು ಜೀವನ ರೂಪಿಸಿಕೊಳ್ಳಲಿಕ್ಕೆ ಮಾರ್ಗದರ್ಶಕವಾಗಿದ್ದವು. ಉತ್ತಮ ಸಂಸಾರಿಕವಾದ ಕಥೆಗಳು, ಮಾನವೀಯ ಮೌಲ್ಯಗಳನ್ನು ಬಿತ್ತುವಂತಹ ಸನ್ನಿವೇಶಗಳಿಂದ ಕೂಡಿರುತ್ತಿದ್ದ ಕಾರಣ ಕುಟುಂಬ ಸಮೇತರಾಗಿ ಚಲನಚಿತ್ರ ನೋಡುವಂತಹ ಅಭಿರುಚಿಯೂ ಜನರಲ್ಲಿತ್ತು ಎಂದರು.

ADVERTISEMENT

ಕಾಲಕ್ರಮೇಣ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಿರುವಾಗಲೇ ಹೊಸ ಹೊಸ ಆವಿಷ್ಕಾರಗಳಿಗೆ ಮಾರುಹೋಗುತ್ತಿರುವ ದಿನಗಳಲ್ಲಿ ಕೇವಲ ಆರ್ಥಿಕ ಸಬಲತೆಗಾಗಿ ಚಿತ್ರಗಳ ನಿರ್ಮಾಣವಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.

ಸಿನಿಮಾ ರಂಗವೂ ಮಾಧ್ಯಮವಾಗಿ ಕಾರ್ಯನಿರ್ವಹಿಸಬೇಕಿದೆ. ಸಮಾಜದ ದ್ವನಿಯಾಗಿ ಕೆಲಸ ಮಾಡುವಲ್ಲಿ ವಿಫಲರಾಗುತ್ತಿರುವ ಕಾರಣ ಸಮಾಜದಲ್ಲಿ ಅಶಾಂತಿ, ಜಾತಿವ್ಯವಸ್ಥೆ, ಭ್ರಷ್ಟಾಚಾರ, ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಲೇ ಇವೆ ಎಂದರು.

ಗಂಗವಾರ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ನಾಗರಾಜ್ ಮಾತನಾಡಿ, ಯುವಜನರಲ್ಲಿ ಕ್ರಿಯಾತ್ಮಕವಾದ ಚಿಂತನೆಗಳಿದ್ದರೂ ಅವುಗಳನ್ನು ಸರಿಯಾದ ಸಮಯದಲ್ಲಿ ಉಪಯೋಗ ಮಾಡಲಿಕ್ಕೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಇಂತಹ ಕಿರುಚಿತ್ರಗಳ ನಿರ್ಮಾಣವೂ ಸೇರಿದಂತೆ ಜನರನ್ನು ಜಾಗೃತಗೊಳಿಸುವಂತಹ ಚಿತ್ರಗಳು ನಿರ್ಮಾಣ ಮಾಡಲಿಕ್ಕೆ ಅವಕಾಶಗಳು ಕಲ್ಪಿಸಬೇಕು. ಯುವಜನರು ತಮಗೆ ಸಿಗುವಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಯುವಕಲಾವಿದರಿಗೆ ಉತ್ತಮ ಅವಕಾಶಗಳು ಕೊಟ್ಟಂತೆ ಆಗುತ್ತದೆ ಎಂದರು.

ಚಿತ್ರತಂಡದ ಕಲಾವಿದರಾದ ಬಿ.ಎನ್. ಅಭಿಷೇಕ್, ಚಕ್ರವರ್ತಿ, ವಿಠಲ್, ಮಹೇಶ್, ಕಬಾಲಿ, ಗ್ರಾಮಸ್ಥರಾದ ಕುಮಾರ್, ಆನಂದ್‌ಕುಮಾರ್, ಮಾರುತಿ, ಸಂಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.