ADVERTISEMENT

ಏಡ್ಸ್ ರೋಗಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿ

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶ್ವ ಮಧುಮೇಹ ದಿನ, ಏಡ್ಸ್‌ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 13:42 IST
Last Updated 13 ಡಿಸೆಂಬರ್ 2019, 13:42 IST
ವಿಜಯಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಸಾಪ ವತಿಯಿಂದ ಆಯೋಜಿಸಿದ್ದ ವಿಶ್ವ ಮಧುಮೇಹ ದಿನ ಹಾಗೂ ಏಡ್ಸ್ ದಿನಾಚರಣೆಯಲ್ಲಿ ಡಾ. ಶ್ಯಾಂಸುಂದರ್ ಮಾತನಾಡಿದರು
ವಿಜಯಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಸಾಪ ವತಿಯಿಂದ ಆಯೋಜಿಸಿದ್ದ ವಿಶ್ವ ಮಧುಮೇಹ ದಿನ ಹಾಗೂ ಏಡ್ಸ್ ದಿನಾಚರಣೆಯಲ್ಲಿ ಡಾ. ಶ್ಯಾಂಸುಂದರ್ ಮಾತನಾಡಿದರು   

ವಿಜಯಪುರ: ಏಡ್ಸ್ ಗುಣವಾಗದ ರೋಗವೇನೋ ಹೌದು. ಆದರೆ ಬಾಧಿತರನ್ನು ಕೀಳಾಗಿ ಕಾಣುವ ಅಗತ್ಯವಿಲ್ಲ ಎಂದು ವೈದ್ಯ ಡಾ.ಶ್ಯಾಂಸುಂದರ್ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ವಿಶ್ವಮಧುಮೇಹ ದಿನ ಹಾಗೂ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಗೃತಿಗೆ ಸಾಕಷ್ಟು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಅದರ ಪರಿಣಾಮವಾಗಿಯೇ ಏಡ್ಸ್ ಇರುವವರು, ತಾವೂ ಸಮಾಜದಲ್ಲಿ ಬದುಕಲು ಅರ್ಹರು ಎಂಬ ಧೈರ್ಯ ತಂದುಕೊಳ್ಳುವಂತಾಗಿದೆ ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ಮಧುಮೇಹ ಕಾಯಿಲೆಗೆ ನಿರಂತರವಾಗಿ ಔಷಧ ತೆಗೆದುಕೊಂಡರೆ ಹೇಗೆ ನಿಯಂತ್ರಣದಲ್ಲಿ ಇಡಬಹುದೋ ಅದೇ ರೀತಿ ಏಡ್ಸ್ ಕೂಡ. ಆಪ್ತ ಸಮಾಲೋಚನೆಗೆ ಒಳಗಾಗುತ್ತಿದ್ದರೆ ಅವರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಅದರಿಂದಾಗಿ ಜೀವಿತಾವಧಿಯಂತೂ ಖಂಡಿತ ಹೆಚ್ಚಾಗುತ್ತದೆ. ಎಚ್.ಐ.ವಿ. ಸೋಂಕು ಮನುಕುಲಕ್ಕೆ ಬಂದೊದಗಿದ ವಿಪತ್ತು. ಈ ಸೋಂಕು ಬರದಂತೆ ತಡೆಯಲು ಯಾವ ಲಸಿಕೆಯೂ ಇಲ್ಲ. ಪೂರ್ಣ ಮಟ್ಟದಲ್ಲಿ ಗುಣಪಡಿಸುವ ಔಷಧಿಗಳೂ ಇಲ್ಲ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೊಂದೇ ಈ ಸೋಂಕಿನ ತಡೆಗಿರುವ ಏಕೈಕ ಮಾರ್ಗ ಎಂದರು.

ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಸುಮಾ ಮಾತನಾಡಿ, ಏಡ್ಸ್, ಎಚ್.ಐ.ವಿ ವೈರಸ್, ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಇದರಿಂದ ಹಲವಾರು ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗಕ್ಕೆ ನಿರ್ದಿಷ್ಟವಾದ ಚಿಹ್ನೆಗಳಿಲ್ಲ. ಆದರೆ, ಬಹುಮಟ್ಟಿಗೆ ಯಾವುದೇ ಕಾರಣವಿಲ್ಲದೆ ಒಂದು ತಿಂಗಳ ಅವಧಿಯಲ್ಲಿ ಶರೀರದ ತೂಕ ಶೇ 10ಕ್ಕಿಂತಲೂ ಹೆಚ್ಚು ಕಡಿಮೆಯಾಗುತ್ತದೆ ಎಂದು ವಿವರಿಸಿದರು.

ಯಾವುದೇ ಚಿಕಿತ್ಸೆಗೆ ಗುಣವಾಗದೆ ಒಂದು ತಿಂಗಳಿಗಿಂತಲೂ ಹೆಚ್ಚು ದಿನ ಕಂಡು ಬರುವ ಜ್ವರ ಹಾಗೂ ಬೇಧಿ ಏಡ್ಸ್ ರೋಗದ ಮುಖ್ಯ ಲಕ್ಷಣಗಳಾಗಿವೆ ಎಂದರು.

ಸೋಂಕು ಹರಡುವ ಬಗೆ: ಅಸುರಕ್ಷಿತ ಲೈಂಗಿಕ ಕ್ರಿಯೆ, ಸೋಂಕಿರುವ ವ್ಯಕ್ತಿಯ ರಕ್ತ ಪಡೆಯುವುದು, ಸೋಂಕಿರುವ ವ್ಯಕ್ತಿಯು ಉಪಯೋಗಿಸಿದ ಸಿರಿಂಜ್‌, ಸೂಜಿ ಮತ್ತು ಉಪಕರಣಗಳನ್ನು ಸಂಸ್ಕರಿಸದೆ ಬಳಸುವುದು, ಸೋಂಕಿರುವ ತಾಯಿಯು ಮಗುವಿಗೆ ಜನ್ಮ ನೀಡುವುದರಿಂದ ಈ ಸೋಂಕು ಹರಡುತ್ತದೆ. ಏಕೈಕ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ, ಸುರಕ್ಷಿತ ಲೈಂಗಿಕತೆಗೆ ನಿರೋಧ್ ಬಳಸುವುದು, ಹೊಸ ಸೂಜಿ, ಸಿರಿಂಜ್‌ಗಳ ಬಳಕೆ, ಗರ್ಭಿಣಿ ಮಹಿಳೆಯರು ಎಚ್.ಐ.ವಿ. ಪರೀಕ್ಷೆಯನ್ನು ಸ್ವಯಂಪ್ರೇರಿತರಾಗಿ ಐ.ಸಿ.ಟಿ.ಸಿ.ಯಲ್ಲಿ ಮಾಡಿಸಿಕೊಂಡು, ಸೋಂಕಿದ್ದಲ್ಲಿ ಎ.ಆರ್.ಟಿ, ಎ.ಆರ್.ವಿ ಚಿಕಿತ್ಸೆಯನ್ನು ಪ್ರಾರಂಭಿಸುವುದರಿಂದ ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂದು ಮಾಹಿತಿ ನೀಡಿದರು.

ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಪ್ರಧಾನ ಕಾರ್ಯದರ್ಶಿ ಮುನಿವೆಂಕಟರವಣಪ್ಪ, ನಾರಾಯಣಸ್ವಾಮಿ, ವೈದ್ಯರಾದ ಡಾ.ರಾಜುಲಂಬಾಣಿ, ಡಾ.ಸುನೀತಾ, ಡಾ.ಉದಯ್‌ಕುಮಾರ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.