ದೊಡ್ಡಬಳ್ಳಾಪುರ: ‘ಜಗತ್ತಿಗೆ ಆಧ್ಯಾತ್ಮ ಚಿಂತನೆ ನೀಡಿದ ನಮ್ಮ ದೇಶ ವೈಜ್ಞಾನಿಕ ಕ್ಷೇತ್ರದಲ್ಲಿಯೂ ಮುನ್ನಡೆ ಸಾಧಿತ್ತಿದ್ದು, ಜಗತ್ತಿನ 4ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಹೇಳಿದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶುಕ್ರವಾರ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕೆ ದುಡಿದ ಮಹನೀಯರನ್ನು ನಾವು ಸದಾ ಸ್ಮರಿಸಬೇಕು. ರಾಷ್ಟ್ರಭಕ್ತಿಯ ಮೂಲಕ ಈ ದೇಶವನ್ನು ಮತ್ತಷ್ಟು ಬಲಿಷ್ಟವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮೆಲ್ಲರ ಶ್ರಮ ಹಾಗೂ ದುಡಿಮೆಯನ್ನು ಅರ್ಪಿಸಬೇಕಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಧೀರಜ್ ಮುನಿರಾಜು ಮಾತನಾಡಿ, ‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರನ್ನು ನಾವು ಸದಾ ಸ್ಮರಿಸಬೇಕು. ನನ್ನ ದೇಶ ಎನ್ನುವ ಹೆಮ್ಮೆ, ದೇಶಾಭಿಮಾನ ಮೂಡಿಸಿಕೊಳ್ಳಬೇಕು. ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆಯ ಆಲೋಚನೆ, ಸಾಮಾಜಿಕ ಕಳಕಳಿಯಿಂದ ಮಾತ್ರ ಸಾಧ್ಯ. ಆಪರೇಷನ್ ಸಿಂಧೂರ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ಮರಣಿಯ ಎಂದರು.
ಎನ್‌ಸಿಸಿ ಅಧಿಕಾರಿ ಅಶ್ವಿನಿ ನೇತೃತ್ವದಲ್ಲಿ ಎನ್‌ಸಿಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಬ್ಯಾಂಡ್‌ಸೆಟ್‌ಗಳ 1500 ಕ್ಕೂ ಹೆಚ್ಚು ಮಂದಿಯಿಂದ ಪಥಸಂಚಲನ ನಡೆಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಿ.ನಾಗರಾಜ (ಶಿಕ್ಷಣ), ಸಿ.ಎಂ.ಶಿವಾನಂದ (ಪೊಲೀಸ್ ಇಲಾಖೆ), ವರ್ಷನ್,ದಿವ್ಯ(ಕ್ರೀಡೆ),ಪ್ರದೀಪ್ ಕುಮಾರ್ (ಪತ್ರಿಕೋದ್ಯಮ),ಗೂಳ್ಯ ಹನುಮಣ್ಣ (ಹೋರಾಟ), ಎಚ್.ವಿ.ಪ್ರವೀಣ್ ಕುಮಾರ್ (ಸಮಾಜ ಸೇವೆ), ಡಿ.ಎಸ್.ವಿಶ್ವಾಸ್ (ಸಾಂಸ್ಕೃತಿಕ), ವಾಣಿಗರಹಳ್ಳಿ ಶ್ರೀನಿವಾಸ್(ಸಾಹಿತ್ಯ), ಲಘುಮಯ್ಯ ತುರುವನಹಳ್ಳಿ ,ಪದ್ಮಾವತಮ್ಮ (ರಂಗಭೂಮಿ),ಅಣ್ಣಪ್ಪ (ಪೌರ ಕಾರ್ಮಿಕ) ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ, ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಮರೇಶಗೌಡ ಭಾಗವಹಿಸಿದ್ದರು.
ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಂಕಲ್ಪದ ಚಿಂತನೆ ದೇಶದ ಪ್ರಗತಿಗೆ ಪೂರಕ. ರಾಜ್ಯದಲ್ಲಿ ದೊಡ್ಡಬಳ್ಳಾಪುರ ತೀವ್ರ ಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಇದನ್ನು ಸಮರ್ಪಕವಾಗಿ ಮುನ್ನಡೆಸಬೇಕಿದ್ದು ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆಧೀರಜ್ ಮುನಿರಾಜುಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.