ADVERTISEMENT

ಸೋಂಕು ಇಳಿಕೆ: ಆಸ್ಪತ್ರೆ ಖಾಲಿ

ಮೂರು ಕೋವಿಡ್‌ ಕೇರ್‌ ಸೆಂಟರ್‌ ಕಾರ್ಯ ನಿರ್ವಹಣೆ

ನಟರಾಜ ನಾಗಸಂದ್ರ
Published 18 ಜೂನ್ 2021, 4:41 IST
Last Updated 18 ಜೂನ್ 2021, 4:41 IST
ದೊಡ್ಡಬಳ್ಳಾಪುರ ಹೃದಯ ಭಾಗದ ಚೌಕದ ವೃತ್ತ ಹಾಗೂ ಸುತ್ತಲಿನ ಮುಖ್ಯ ವಾಣಿಜ್ಯ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿರುವುದು
ದೊಡ್ಡಬಳ್ಳಾಪುರ ಹೃದಯ ಭಾಗದ ಚೌಕದ ವೃತ್ತ ಹಾಗೂ ಸುತ್ತಲಿನ ಮುಖ್ಯ ವಾಣಿಜ್ಯ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿರುವುದು   

ದೊಡ್ಡಬಳ್ಳಾಪುರ:ಸದಾ ಜನ ಜಂಗುಳಿ, ದ್ವಿಚಕ್ರವಾಹನಗಳಿಂದ ತುಂಬಿರುತ್ತಿದ್ದ ನಗರದ ಮುಖ್ಯರಸ್ತೆ, ಚೌಕದ ವೃತ್ತ, ಸೌಂದರ್ಯ ಮಹಲ್‌ ವೃತ್ತಗಳು ಒಂದು ತಿಂಗಳಿಂದಲೂ ಬಿಕೋ ಎನ್ನುತ್ತಿವೆ.

ಅದರಲ್ಲೂ ಕೋವಿಡ್‌ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೂನ್ 21ರವರೆಗೂ ಲಾಕ್‌ಡೌನ್‌ ವಿಸ್ತರಣೆಯಾದ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗಿರುವ ವರದಿ ಬಂದ ನಂತರವಂತೂ ನಗರದಲ್ಲಿ ಜನ ಸಂಚಾರವೇ ಇಲ್ಲದಾಗಿದೆ.

ಚೌಕದ ವೃತ್ತ ಇಡೀ ದೊಡ್ಡಬಳ್ಳಾಪುರಕ್ಕೆ ಹೃದಯ ಭಾಗವಾಗಿದೆ. ನಗರದ ಯಾವುದೇ ಮುಖ್ಯ ವಾಣಿಜ್ಯ ಪ್ರದೇಶಗಳಿಗೆ ಹೋಗಬೇಕಿದ್ದರು ಚೌಕದ ವೃತ್ತವೇ ಮುಖ್ಯ. ಇಂತಹ ವೃತ್ತದಲ್ಲಿನ ನಾಲ್ಕು ಕಡೆಯ ರಸ್ತೆಗಳಲ್ಲಿನ ಎಲ್ಲಾ ವಾಣಿಜ್ಯ ಮಳಿಗೆಗಳು ಬಂದ್‌ ಆಗಿವೆ. ನಗರದ ಇತರೆಡೆಗಳಲ್ಲಿನ ಹೋಟೆಲ್‌, ಬೀದಿಬದಿಗಳಲ್ಲಿ ಹಣ್ಣುಗಳನ್ನು ಮಾರಾಟ ಮಾಡುವವರಾದರು ಕಾಣುತ್ತಾರೆ. ಆದರೆ, ಬೆಳಿಗ್ಗೆ 10 ಗಂಟೆಯವರೆಗೆ ಒಂದಿಷ್ಟು ವಾಹನ, ಜನ ಸಂಚಾರ ಕಾಣಬಹುದಾದರೂ ಮಧ್ಯಾಹ್ನದ ವೇಳೆಗೆ ಜನ ಸಂಚಾರವೇ ಇಲ್ಲದೆ ಈ ನಗರದಲ್ಲಿ ಜನರು ವಾಸವೇ ಇಲ್ಲವೆನೋ ಎನ್ನುವಂತೆ ಭಾಸವಾಗುತ್ತದೆ.

ADVERTISEMENT

ಆಸ್ಪತ್ರೆಗಳು ಖಾಲಿ ಖಾಲಿ: ಏಪ್ರಿಲ್‌ ಎರಡನೇ ವಾರದಿಂದ ಆರಂಭವಾಗಿ ಮೇ ಮೂರನೇ ವಾರದವರೆಗೂ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟೇ ಹಣ ನೀಡಿದರೂ ರೋಗಿಗಳಿಗೆ ಬೆಡ್‌ ದೊರೆಯದಾಗಿದ್ದವು. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಂತೂ ಬೆಡ್‌ಗಳು ದೊರೆಯುವುದೆಂದರೆ ರೋಗಿಗೆ ಮರುಜೀವ ದೊರೆತಂತೆಯೇ ಆಗಿತ್ತು.

ನಗರದ ಮುಖ್ಯರಸ್ತೆಗಳಿರಲಿ ಸಂದಿಗಳಲ್ಲಿ ಇದ್ದ ಔಷಧ ಮಳಿಗೆಗಳ ಮುಂದೆಯು ಗ್ರಾಹಕರು ಮಾತ್ರೆ, ಔಷಧ ಖರೀದಿಸಲು ಸಾಲುಗಟ್ಟಿ ನಿಂತಿರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ, ಜೂನ್‌ ಎರಡನೇ ವಾರ ಆರಂಭವಾಗುತ್ತಿದ್ದಂತೆ ಎಲ್ಲಾ ಆಸ್ಪತ್ರೆಗಳು ರೋಗಿಗಳಿಲ್ಲದೆ ಖಾಲಿ ಖಾಲಿಯಾಗಿವೆ. ಸರ್ಕಾರಿ ಆಸ್ಪತ್ರೆಯಲ್ಲೂ ಬೆಡ್‌, ಆಮ್ಲಜನಕ, ರೆಮ್ಮಿಡಿಸಿವಿರ್‌ ಔಷಧಿ ಸೇರಿದಂತೆ ಕೋವಿಡ್‌ ಚಿಕಿತ್ಸೆ, ಕೋವಿಡ್‌ ಆರೈಕೆ ಕೇಂದ್ರದಲ್ಲೂ ಅಗತ್ಯ ಸೌಲಭ್ಯ ದೊರೆಯುತ್ತಿವೆ. ಹೀಗಾಗಿ ಕೋವಿಡ್‌ ರೋಗಿಗಳು ಖಾಸಗಿ ಆಸ್ಪತ್ರೆಗಳಿಗಿಂತಲು ಸರ್ಕಾರಿ ಆಸ್ಪತ್ರೆಗಳ ಕಡೆಗೆ ಹೆಚ್ಚಾಗಿ ಹೋಗುತ್ತಿದ್ದಾರೆ.

ಕೊರೊನಾ ಎರಡನೇ ಅಲೆಯಲ್ಲಿ ಸಂಭವಿಸುತ್ತಿದ್ದ ಸಾವುಗಳ ಸಂಖ್ಯೆಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದ ಜನ, ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ನಿಟ್ಟಿಸಿರು ಬಿಡುವಂತಾಗಿದೆ. ನಗರದ ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ಪ್ರತಿ ದಿನ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಇದಲ್ಲದೆ ಎಪಿಎಂಸಿ ಸೇರಿದಂತೆ ನಗರ ಹಾಗೂ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸೋಂಕು ಪತ್ತೆಗಾಗಿ ಗಂಟಲ ದ್ರವ ಸಂಗ್ರಹಿಸಲಾಗುತ್ತದೆ.

‘ಕೋವಿಡ್‌ ಪ್ರಕರಣ ಹೆಚ್ಚಾಗಿದ್ದ ಸಮಯದಲ್ಲಿ ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ತೆರೆಯಲಾಗಿದ್ದ ಐದು ಕೋವಿಡ್‌ ಆರೈಕೆ ಕೇಂದ್ರಗಳ ಪೈಕಿ ಮಧುರೆ ಹೋಬಳಿಯ ಇಸ್ತೂರು, ದೊಡ್ಡಬೆಳವಂಗಲ ಹೋಬಳಿಯ ಮಾಡೇಶ್ವರ, ತೂಬಗೆರೆ ಹೋಬಳಿಯ ಗುಂಡಮಗೆರೆ ಕ್ರಾಸ್‌ನ ಕೋವಿಡ್‌ ಆರೈಕೆ ಕೇಂದ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದರೊಂದಿಗೆ ಮಕ್ಕಳಿಗಾಗಿಯೇ ದೊಡ್ಡಬೆಳವಂಗಲದಲ್ಲಿ ಪ್ರತ್ಯೇಕ ಆರೈಕೆ ಕೇಂದ್ರ ಸಿದ್ಧಪಡಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ
ಡಾ.ಪರಮೇಶ್ವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.