ADVERTISEMENT

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 14:35 IST
Last Updated 6 ಮಾರ್ಚ್ 2020, 14:35 IST
ಆನೇಕಲ್‌ನಲ್ಲಿ ಪ್ರಜಾವಿಮೋಚನಾ ಚಳವಳಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಸರ್ಕಾರಿ ಜಮೀನು ಒತ್ತುವರಿ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದರು
ಆನೇಕಲ್‌ನಲ್ಲಿ ಪ್ರಜಾವಿಮೋಚನಾ ಚಳವಳಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಸರ್ಕಾರಿ ಜಮೀನು ಒತ್ತುವರಿ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದರು   

ಆನೇಕಲ್: ಒತ್ತುವರಿಯಾಗಿರುವ ಸರ್ಕಾರಿ ಜಮೀನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಸಂಬಂಧಿಸಿದ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್‌ ಕೃಷ್ಣಪ್ಪ ಆರೋಪಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆನೇಕಲ್‌ ತಾಲ್ಲೂಕಿನ ಜಿಗಣಿ ಹೋಬಳಿ ಹುಲಿಮಂಗಲ ಗ್ರಾಮದ ಸರ್ವೆ ನಂ.156ರಲ್ಲಿ 5 ಎಕರೆ ಭೂಮಿಯನ್ನು ಆಶ್ರಯ ಸಮಿತಿಗೆ ನೀಡುವಂತೆ ನೀಡಿ ಆದೇಶ ಮಾಡಿದ್ದರೂ ಸಂಬಂಧಿಸಿದವರು ಸರ್ಕಾರಿ ಜಾಗವನ್ನು ತೆರವುಗೊಳಿಸಿಲ್ಲ. ಇಲ್ಲಿ ದೇವಾಲಯ ಕಟ್ಟಿಕೊಂಡು ಸದ್ಗುರು ಸಾಯಿಬಾಬ ಚಾರಿಟಬಲ್‌ ಟ್ರಸ್ಟ್ ಹೆಸರಿನಲ್ಲಿ ಒಂದೇ ಕುಟುಂಬದವರು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ತೆರವುಗೊಳಿಸುವಂತೆ ಆದೇಶ ನೀಡಿದ್ದರೂ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳು ಕ್ರಮ ಕೈಗೊಂಡಿಲ್ಲ. ಸರ್ಕಾರಿ ಜಾಗವನ್ನು ಉಳಿಸಲು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು. ಸರ್ಕಾರಿ ಜಮೀನು ತೆರವುಗೊಳಿಸಿ ವಶಕ್ಕೆ ಪಡೆಯದಿದ್ದರೆ ತಾಲ್ಲೂಕು ಪಂಚಾಯಿತಿ ಮುಂದೆ ಹಗಲು ರಾತ್ರಿ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಹುಲಿಮಂಗಲ ವ್ಯಾಪ್ತಿಯಲ್ಲಿ ಸುಮಾರು 200 ಎಕರೆ ಸರ್ಕಾರಿ ಜಾಗವಿದೆ. ಈ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸುವಂತೆ ಮಾಡಲು ಸಂಘಟನೆ ವತಿಯಿಂದ ಹಲವು ಹೋರಾಟಗಳನ್ನು ನಡೆಸಿದರೂ ತಾಲ್ಲೂಕು ಆಡಳಿತ ಸಹಕರಿಸುತ್ತಿಲ್ಲ. ಸ್ವತಃ ಜಿಲ್ಲಾಧಿಕಾರಿ ಆನೇಕಲ್‌ನಲ್ಲಿ ಈ ವಿಷಯದ ಸಂಬಂಧ ಫೆ.12ರಂದು ಸಭೆ ನಡೆಸಿ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಜಾರಿಯಾಗಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಹಸಿರು ವಲಯವಾಗಿದ್ದರೂ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ನಿಯಮಗಳನ್ನು ಉಲ್ಲಂಘಿಸಿ ಬಡಾವಣೆಗಳನ್ನು ನಿರ್ಮಿಸಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದರು.

ಸಂಘಟನೆಯ ಪದಾಧಿಕಾರಿಗಳಾದ ಯಡವನಹಳ್ಳಿ ಕೃಷ್ಣಪ್ಪ, ಹುಲಿಮಂಗಲ ರವಿಕುಮಾರ್‌, ಅರೇಹಳ್ಳಿ ಅಶ್ವಥ್‌, ಆಂಜಿ, ರವಿ, ವೆಂಕಟೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.