ADVERTISEMENT

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 3:15 IST
Last Updated 4 ಮಾರ್ಚ್ 2021, 3:15 IST
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆನೇಕಲ್‌ನಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಂತರ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆನೇಕಲ್‌ನಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಂತರ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು   

ಆನೇಕಲ್:ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಕೊಲೆ ಪ್ರಕರಣಗಳನ್ನು ವಿರೋಧಿಸಿ ಆನೇಕಲ್‌ ವಕೀಲರ ಸಂಘದಿಂದ ಪಟ್ಟಣದ ಕೋರ್ಟ್ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಪಟಾಪಟ್‌ ಪ್ರಕಾಶ್‌ ಮಾತನಾಡಿ, ರಾಜ್ಯದಲ್ಲಿ ಹಲವೆಡೆ ವಕೀಲರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಇತ್ತೀಚಿಗೆ ಹೊಸಪೇಟೆಯಲ್ಲಿ ಕೋರ್ಟ್‌ ಆವರಣದಲ್ಲಿಯೇ ವಕೀಲರೊಬ್ಬರನ್ನು ಕೊಲೆ ಮಾಡಲಾಗಿದೆ. ವಕೀಲರು ಪ್ರಾಣಭಯದಿಂದ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು. ವಕೀಲರಿಗೆ ರಕ್ಷಣೆ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.

ವಕೀಲರ ಮೇಲಿನ ಹಲ್ಲೆಯಂತಹ ದುಷ್ಕತ್ಯಗಳಲ್ಲಿ ಭಾಗವಹಿಸುವವರ ಪರವಾಗಿ ವಕಾಲತ್ತು ಹಾಕದಿರುವ ತೀರ್ಮಾನವನ್ನು ಕೈಗೊಂಡು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾಗೆ ಮನವಿ ಸಲ್ಲಿಸಲಾಗುವುದು. ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ADVERTISEMENT

ಆನೇಕಲ್‌ ನ್ಯಾಯಾಲಯದ ಮುಂಭಾಗದಲ್ಲಿ ಜಮಾವಣೆಗೊಂಡ ನೂರಾರು ವಕೀಲರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಹೊಸಪೇಟೆಯಲ್ಲಿ ಕೊಲೆಯಾದ ವಕೀಲರಿಗೆ ನ್ಯಾಯ ದೊರಕಿಸಿ ಕೊಡಬೇಕು. ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳನ್ನು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಪ್ರತಿಭಟನಾನಿರತ ವಕೀಲರು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪಿ. ದಿನೇಶ್‌ ಮನವಿ ಪತ್ರಸ್ವೀಕರಿಸಿದರು.

ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎ.ಜಿ. ರಾಜು, ಖಜಾಂಚಿ ಕೆ.ವಿ. ನಾಗರಾಜು, ಜಂಟಿ ಕಾರ್ಯದರ್ಶಿ ಎಸ್.ಕೆ. ನಾಗರಾಜು, ಉಪಾಧ್ಯಕ್ಷ ಆರ್. ರಮೇಶ್, ವಕೀಲರಾದ ಡಿ.ಪಿ. ಸಂಪತ್‌, ಎ.ಎಂ. ಶ್ರೀನಿವಾಸರೆಡ್ಡಿ, ರಮೇಶ್, ವಿಜಯಕುಮಾರ್, ಪ್ರಕಾಶ್‌ ರೆಡ್ಡಿ, ಎಚ್‌. ಶ್ರೀನಿವಾಸ್‌, ಆನಂದ ಚಕ್ರವರ್ತಿ, ವನಮಾಲಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.