ADVERTISEMENT

ಗ್ರಾಮದ ಅಭಿವೃದ್ಧಿಗೆ ಶ್ರಮಿಸಲು ಶಾಸಕರ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 3:20 IST
Last Updated 7 ಜನವರಿ 2021, 3:20 IST
ಚನ್ನರಾಯಪಟ್ಟಣ ಹೋಬಳಿಯ ಐಬಸಾಪುರ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿನಂದಿಸಿದರು
ಚನ್ನರಾಯಪಟ್ಟಣ ಹೋಬಳಿಯ ಐಬಸಾಪುರ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿನಂದಿಸಿದರು   

ವಿಜಯಪುರ: ‘ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗುರುತಿಸಿರುವ ಜನತೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಯ ಜೊತೆಗೆ ಪಕ್ಷದ ಸಂಘಟನೆಗೂ ಒತ್ತು ನೀಡಲಾಗುತ್ತದೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಐಬಸಾಪುರ ಗ್ರಾಮ ಪಂಚಾಯಿತಿಗೆ ಜೆಡಿಎಸ್ ಬೆಂಬಲಿತರಾಗಿ ಆಯ್ಕೆಯಾಗಿರುವ ಸದಸ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು.

ಪಕ್ಷವನ್ನು ಬೂತ್ ಮಟ್ಟದಿಂದಲೇ ಸಂಘಟಿಸಲಾಗುವುದು. ಆ ಮೂಲಕ ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಪಕ್ಷವನ್ನು ಸದೃಢಗೊಳಿಸಿ, ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗುವಂತೆ ಸದಸ್ಯರು ನೋಡಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಚುನಾವಣೆಗಳಲ್ಲಷ್ಟೇ ರಾಜಕಾರಣ ಮಾಡಬೇಕು. ಅಭಿವೃದ್ಧಿ ವಿಚಾರ ಬಂದಾಗ ಪಕ್ಷಭೇದ ಮರೆತು ಕೆಲಸ ಮಾಡಬೇಕು ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಹಳ್ಳಿಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಮಹತ್ತರವಾಗಿದೆ. ಜನರು ಸದಸ್ಯರ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವಂತಹ ಕೆಲಸ ಮಾಡಬೇಕು. ಕುಡಿಯುವ ನೀರು, ಚರಂಡಿ, ಬೀದಿದೀಪ ನಿರ್ವಹಣೆಯ ಜೊತೆಗೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಸರ್ಕಾರದಿಂದ ಬರುವಂತಹ ಅನುದಾನಗಳನ್ನು ಅರ್ಹ ಬಡವರಿಗೆ ನೀಡುವ ಮೂಲಕ ವಸತಿರಹಿತರ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಮುಖಂಡರಾದ ಬಿ. ರಾಜಣ್ಣ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.