ADVERTISEMENT

ಅಂತರ ಕಾಲೇಜು ಕಬಡ್ಡಿ ಟೂರ್ನಿಗೆ ಚಾಲನೆ

ಬೆಂಗಳೂರು ಉತ್ತರ ವಿವಿ: ವಿವಿಧ ಕಾಲೇಜಿನ 1,092 ಕ್ರೀಡಾಪಟುಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 4:34 IST
Last Updated 19 ಆಗಸ್ಟ್ 2022, 4:34 IST
ದೇವನಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದ ಗಣ್ಯರು
ದೇವನಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದ ಗಣ್ಯರು   

ದೇವನಹಳ್ಳಿ: ‘ಆಟದಲ್ಲಿ ಸೋಲು–ಗೆಲುವು ಸಹಜ. ಸೋಲು ಹುರಿದುಂಬಿಸುತ್ತದೆ. ಗೆಲುವು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ’ ಎಂದು ಜಿ.ಪಂ. ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರದಿಂದ ಆರಂಭವಾದ ಎರಡು ದಿನಗಳ ಕಾಲ ನಡೆಯಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಕಾಲೇಜು ಪುರುಷರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಆಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಾಲೇಜುಗಳ ಹೆಸರು ಉಳಿಸುವ ಕೆಲಸ ಮಾಡಬೇಕು. ತೀರ್ಪುಗಾರರ ನಿರ್ಧಾರಕ್ಕೆ ಬದ್ಧರಾಗಿರಬೇಕು. ಅದೇ ರೀತಿ ತೀರ್ಪುಗಾರರು ಸಹ ಯಾವುದೇ ತಾರತಮ್ಯ ಇಲ್ಲದೆ ನ್ಯಾಯಯುತ ತೀರ್ಪು ನೀಡಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತಹ ಪ್ರತಿಭೆಗಳು ಇಲ್ಲಿಂದ ಹೊರಹೊಮ್ಮಲು ಸಹಕರಿಸಿ ಪ್ರೋತ್ಸಾಹಿಸಬೇಕು. ಯುವ ಪ್ರತಿಭೆಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ADVERTISEMENT

ಸಿಂಡಿಕೇಟ್‌ ಸದಸ್ಯ ದೇವರಾಜ್‌ ಮಾತನಾಡಿ, ಇಂತಹ ಕ್ರೀಡಾ ಪಂದ್ಯಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ನಾ ಮುಂದು ತಾ ಮುಂದು ಎಂದು ಮಾಡುತ್ತವೆ. ಇದಕ್ಕೆ ಅಪವಾದ ಎನ್ನುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮೀರಿ ಸರ್ಕಾರಿ ಕಾಲೇಜುಗಳು ಕೂಡ ಟೂರ್ನಿ ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದರು.

ವಿವಿಯಿಂದ ಕ್ರೀಡಾ ಚಟುವಟುಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಕಬಡ್ಡಿ ಅತ್ಯುತ್ತಮ ಕ್ರೀಡೆ. ಕ್ರೀಡಾಪಟುಗಳು ಆಡುವಾಗ ದೈಹಿಕ ಆರೋಗ್ಯದ ಬಗ್ಗೆಯೂ ಎಚ್ಚರವಹಿಸಬೇಕು ಎಂದರು.

ದೈಹಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಆರ್. ಶ್ರೀಕಾಂತ ಮಾತನಾಡಿ, ಇಲ್ಲಿನ ಆಟೋಟ ಚಟುವಟಿಕೆಗಳಿಗೆ ಹಳೆಯ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಉಪನ್ಯಾಸಕರು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಎಸ್‌.ಎಂ. ರವಿಕುಮಾರ್‌ ಮಾತನಾಡಿ, ಕ್ರೀಡಾ ಸ್ಫೂರ್ತಿಯಿಂದ ವಿದ್ಯಾರ್ಥಿಗಳು ಭಾಗವಹಿಸಬೇಕು. ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಈ ಪಂದ್ಯಾವಳಿಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ವಿವಿಧ ಕಾಲೇಜಿನ 78 ತಂಡಗಳ 1,092 ಕ್ರೀಡಾಪಟುಗಳು ಭಾಗವಹಿಸಿರುವುದು ನಮ್ಮ ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ. ಇವರ ಊಟೋಪಚಾರ, ವಸತಿ, ಇನ್ನಿತರೆ ವ್ಯವಸ್ಥೆಗೆ 60 ಸ್ವಯಂ ಸೇವಕರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಡಿ. ಗೋಪಮ್ಮ, ಸದಸ್ಯರಾದ ವೈಆರ್. ರುದ್ರೇಶ್, ಉಪನ್ಯಾಸಕರಾದ ರವಿಚಂದ್ರ, ಕೆಂಪೇಗೌಡ, ಸಿಂಡಿಕೇಟ್‌ ಸದಸ್ಯರಾದ ಸಂತೋಷ ರೆಡ್ಡಿ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಮುತ್ತುಕುಮಾರ್, ಅಜೇಯ್, ಚೇತನ್‌, ರೈತ ಸಂಘದ ರಾಮಾಂಜಿನಪ್ಪ. ಕಾರ್ಯಕ್ರಮದ ಆಯೋಜಕ ರವಿಚಂದ್ರ, ಡಾ.ಶ್ರೀಕಾಂತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.