ದೊಡ್ಡಬಳ್ಳಾಪುರ: ಮಾದಿಗ ಸಮುದಾಯದ 35 ವರ್ಷಗಳ ಹೋರಾಟದ ಫಲವಾಗಿ ಒಳ ಮೀಸಲಾತಿ ಜಾರಿಯಾಗಿದೆ. ಅನ್ಯಾಯದ ಸಣ್ಣ ನೋವಿನಲ್ಲಿಯೂ ಮಾದಿಗ ಸಮುದಾಯದ ಮುಖಂಡರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮ ಪಡೆಯಬೇಕಿದೆ. ಆದರೆ, ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು. ಅಲೆಮಾರಿ ಸಮುದಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ ಎಂದು ಮಾದಾರ ಮಹಾಸಭಾ ಒಕ್ಕೂಟದ ಮುಖಂಡರು ತಿಳಿಸಿದರು.
ನಗರದಲ್ಲಿ ಮಾದಿಗ ಸಮುದಾಯಗಳ ಒಕ್ಕೂಟದ ಪತ್ರಿಕಾಗೋಷ್ಠಿಯಲ್ಲಿ ಒಳ ಮೀಸಲಾತಿ ಜಾರಿಯನ್ನು ಮಾದಿಗ ಸಮುದಾಯ ಮುಖಂಡರು ಸ್ವಾಗತಿಸಿದರು. ಇದೇ ವೇಳೆ ಮಾತನಾಡಿದ ಸಮುದಾಯದ ಮುಖಂಡರು, ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿದೆ. 101 ಜಾತಿಗಳಲ್ಲಿ ಮಾದಿಗ ಸಮುದಾಯ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿಯೂ ಉಲ್ಲೇಖವಾಗಿದೆ. ವರದಿಯಲ್ಲಿ ಪರಿಶಿಷ್ಟ ಜಾತಿಗಳನ್ನು 5 ಭಾಗಗಳಾಗಿ ವಿಂಗಡಿಸಿದ್ದರು. ಸರ್ಕಾರ 3 ಭಾಗಗಳಾಗಿ ವಿಂಗಡಿಸಿ ಒಳ ಮೀಸಲಾತಿ ಜಾರಿ ಮಾಡಿದೆ ಎಂದರು.
ಅಲೆಮಾರಿ ಸಮುದಾಯ ಇವತ್ತು ಸ್ಪೃಶ್ಯ ಜಾತಿಗಳೊಂದಿಗೆ ಪೈಪೋಟಿ ಮಾಡಲು ಸಾಧ್ಯವಿಲ್ಲ. ಅವರಿಗೆ ಶೇ1ರಷ್ಟು ಮೀಸಲಾತಿ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಗೈ ಮತ್ತು ಎಡಗೈ ಸಮುದಾಯದ ನಾಯಕರೊಂದಿಗೆ ಚರ್ಚಿಸುತ್ತಿದ್ದು, ಅಲೆಮಾರಿ ಸಮುದಾಯಕ್ಕೆ ಶೇ1ರಷ್ಟು ಮೀಸಲಾತಿ ಸಿಗುವ ವಿಶ್ವಾಸ ಇದೆ ಎಂದರು.
ನ್ಯಾ.ನಾಗಮೋಹನ್ ದಾಸ್ ಕೊಟ್ಟ ವರದಿಯನ್ನು ಸರ್ಕಾರ ಗಾಳಿಗೆ ತೂರಿ ಓಲೈಕೆ ರಾಜಕೀಯ ಮತ್ತು ಸಮುದಾಯದ ವೋಟ್ ಬ್ಯಾಂಕ್‌ಗಾಗಿ ಮಣಿದಿದೆ. ಅಲೆಮಾರಿಗಳು ನಮಗಿಂತ ಕೆಟ್ಟ ಸ್ಥಿತಿಯಲ್ಲಿದ್ದಾರೆ. ಅವರನ್ನು ಸ್ಪೃಶ್ಯ ಜಾತಿಗಳಿಗೆ ಸೇರಿಸಿದ್ದಾರೆ. ಜನಸಂಖ್ಯೆಯಲ್ಲಿ ಹೆಚ್ಚಿರುವ ನಾವೇ ಅವರೊಂದಿಗೆ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಅಲೆಮಾರಿಗಳು ಸ್ಪೃಶ್ಯ ಜಾತಿಗಳೊಂದಿಗೆ ಸ್ವರ್ಧಿಸಲು ಸಾಧ್ಯವೇ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾದಾರ ಮಹಾಸಭಾ ಒಕ್ಕೂಟದ ಮುಖಂಡರಾದ ರಾಮಕೃಷ್ಣ,ನಾಗರಾಜು, ಹನುಮಯ್ಯ, ವೆಂಕಟೇಶ್, ಕಾಂತರಾಜು,ರಾಮುನೇರಳಘಟ್ಟ, ತಳವಾರ್ ನಾಗರಾಜು, ಟಿ.ಡಿ.ಮುನಿಯಪ್ಪ,ಶಿವಣ್ಣ, ಗಂಗರಾಜು, ನರಸಪ್ಪ ಗುಂಡುಮಗೆರೆ ,ಮೈಲಾರಪ್ಪ,ನಾರಾಯಣಪ್ಪ,ಹರ್ಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.