ಬಂಧನ
(ಪ್ರಾತಿನಿಧಿಕ ಚಿತ್ರ)
ಆನೇಕಲ್: ಸರಗಳ್ಳತನ ಮತ್ತು ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ತಾಲೂಕಿನ ಜಿಗಣಿ ಪೊಲೀಸರು ಬಂಧಿಸಿ ₹26 ಲಕ್ಷ ಮೌಲ್ಯದ ಚಿನ್ನಾಭರಣ, ನಾಲ್ಕು ದುಬಾರಿ ಬೈಕ್ ಸೇರಿದಂತೆ ಒಟ್ಟು ₹41.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಕನಕಪುರದ ಮುಳ್ಳಳ್ಳಿ ಗ್ರಾಮದ ಶಿವಕುಮಾರ್(35) ಎಂದು ಗುರುತಿಸಲಾಗಿದೆ. ಶಿವಕುಮಾರ್ ವಿರುದ್ಧ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳವು ಸೇರಿದಂತೆ ಒಟ್ಟು 60 ಅಪರಾಧ ಪ್ರಕರಣ ದಾಖಲಾಗಿವೆ.
ಬೆಂಗಳೂರು ನಗರ ಜಿಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯೇ ಈತನ ವಿರುದ್ಧ 13 ಪ್ರಕರಣ ದಾಖಲಾಗಿವೆ. ದಾಬಸ್‌ಪೇಟೆ, ಮಾದನಾಯಕನಹಳ್ಳಿ, ಸರ್ಜಾಪುರ, ಬನ್ನೇರುಘಟ್ಟ, ಕಗ್ಗಲಿಪುರ, ತಮಿಳುನಾಡಿನ ಕೃಷ್ಣಗಿರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ, ದ್ವಿಚಕ್ರ ವಾಹನ ಕಳವು, ಕೊಲೆಯತ್ನ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿವೆ.
ಜಿಗಣಿ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಎಸ್.ಮಂಜುನಾಥ್, ಸಿಬ್ಬಂದಿಗಳಾದ ಮುನಿರಾಜು, ಅನಂತರಾಮಯ್ಯ, ಅಪ್ಪಾಜಿ, ವೆಂಕಟೇಶ್ ಆನಂದ್, ಪರ್ವೇಜ್ ಪಾಷಾ, ಚನ್ನಬಸವ ನಾಯಕ, ಕಾಶಿನಾಥ್ ಕಾಬಡಗಿ, ದೀಪು ನಾಯಕ್, ಮನು, ಶ್ರೀನಿವಾಸ್, ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿ ಮನೆ ಪಕ್ಕ ಬಾಡಿಗೆ ಮನೆ ಹಿಡಿದಿದ್ದ ಪೊಲೀಸರು!
ಸೆಪ್ಟೆಂಬರ್‌ನಲ್ಲಿ ಜಿಗಣಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನವಾಗಿತ್ತು. ಜಿಗಣಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಸಿಸಿಟಿವಿ ಪರಿಶೀಲಿಸಿ ಆರೋಪಿಯ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಶಿವಕುಮಾರ್ ತಾನು ಕದ್ದ ವಸ್ತುಗಳನ್ನು ಬೆಂಗಳೂರಿನ ಕೋಣನಕುಂಟೆಯ ಬಳಿ ಇರುವ ತನ್ನ ಅಕ್ಕನ ಮನೆಯಲ್ಲಿ ಇಟ್ಟು ಕ್ಷಣಾರ್ಧದಲ್ಲಿಯೇ ಮಾಯವಾಗುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಆತನ ಸುಳಿವು ಸಿಗುವುದು ಕಷ್ಟವಾದಾಗ ಜಿಗಣಿ ಪೊಲೀಸರು ಕೋಣನಕುಂಟೆಯ ಆತನ ಅಕ್ಕನ ಮನೆಯ ಬಳಿಯೇ ಮನೆಯೊಂದನ್ನು ಬಾಡಿಗೆಗೆ ಪಡೆದು ಹೊಂಚು ಹಾಕಿ ಕೂತಿದ್ದರು. ಆರೋಪಿ ತನ್ನ ಅಕ್ಕನ ಮನೆಗೆ ಬರುವುದನ್ನು ಕಾದು ಕುಳಿತಿದ್ದರು. ಶನಿವಾರ ಅಕ್ಕನ ಮನೆಗೆ ಬಂದ ಆರೋಪಿಯನ್ನು ಬಂಧಿಸಲು ಮುಂದಾದರು. ಪೊಲೀಸರನ್ನು ನೋಡುತ್ತಿದ್ದಂತೆ ಆರೋಪಿ ತಾನು ತಂದಿದ್ದ ಬೈಕ್‌ನಲ್ಲಿ ಪರಾರಿ ಆಗಲು ಯತ್ನಿಸಿದ. ಪೊಲೀಸರು ಆತನ ದ್ವಿಚಕ್ರ ವಾಹನ ಕೆಳಗೆ ಬೀಳಿಸಿ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದರು.
ಕಳವು ಮಾಡಿದ ಬೈಕ್‌ನಲ್ಲಿಯೇ ಸರಗಳ್ಳತನ
ಶಿವಕುಮಾರ್ ತಾನು ಕದ್ದ ಬೈಕ್ ಸ್ಕೂಟರ್‌ಗಳನ್ನೇ ಬಳಸಿ ಸರಗಳ್ಳತನ ಮಾಡುತ್ತಿದ್ದ. ಇದರಿಂದ ಸುಲಭವಾಗಿ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿದ್ದ. ಬೆಂಗಳೂರಿನ ಶಿವಾಜಿನಗರದ ಖಾಸಗಿ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಆಫ್ ಆಡ್ಮಿನಿಸ್ಟ್ರೇಶನ್ ಕೋರ್ಸ್ ಮುಗಿಸಿದ್ದ ಆತ ತಾಂತ್ರಿಕ ಪರಿಣಿತಿ ಹೊಂದಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.