ADVERTISEMENT

ದೇವನಹಳ್ಳಿ: ನ. 28ರಂದು ಜಲಾಗ್ರಹ ಜನಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:05 IST
Last Updated 27 ನವೆಂಬರ್ 2025, 5:05 IST
ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ. ಆರ್ ಮಾತನಾಡಿದರು
ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ. ಆರ್ ಮಾತನಾಡಿದರು   

ದೇವನಹಳ್ಳಿ: ತೆಲಂಗಾಣ ಜಲಾಗ್ರಹ ಹೋರಾಟದ ಮಾದರಿಯಲ್ಲಿ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಸಮೀಪದ ಬಿದಲೂರು ಕೆರೆಯಲ್ಲಿ ಇದೇ 28ರಂದು  ನೀರಾವರಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಲಾಗ್ರಹ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷರೂ ಆಗಿರುವ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ’ ಎಂದು ತಿಳಿಸಿದರು.

ಬಯಲು ಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಪ್ರದೇಶಗಳು ಸ್ವಾತಂತ್ರ್ಯ ಪೂರ್ವದಿಂದಲೂ ಶಾಶ್ವತ ನೀರಾವರಿ ಯೋಜನೆಯಿಂದ ವಂಚಿತವಾಗಿವೆ. ಎಲ್ಲ ಸರ್ಕಾರಗಳು ಶುದ್ಧ ಕುಡಿಯುವ ನೀರು ನೀಡುವಲ್ಲಿ ವಿಫಲವಾಗಿವೆ ಎಂದು ದೂರಿದರು. 

ADVERTISEMENT

ಮೂರು ದಶಕಗಳಿಂದ ನೀರಿನ ಸೌಲಭ್ಯಕ್ಕಾಗಿ ಅನೇಕ ಚಳವಳಿ, ಧರಣಿಗಳು, ಹೋರಾಟಗಳನ್ನು ನಿರಂತರವಾಗಿ ನಡೆಸುತ್ತಿದ್ದೇವೆ. 15 ವರ್ಷಗಳಿಂದ ಎತ್ತಿನಹೊಳೆ ಯೋಜನೆ ಹೆಸರೇಳಿಕೊಂಡು ಕಾಲಹರಣ ಮಾಡಲಾಗುತ್ತಿದೆ. ದುಂದು ವೆಚ್ಚದ ಮಾಡಿ ಸಾರ್ವಜನಿರಕ ಹಣ ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಎತ್ತಿನ ಹೊಳೆ ಯೋಜನೆಯಿಂದ ಸರ್ಕಾರದ ಹಣ ಪೋಲಾಗುತ್ತಿದೆಯೇ ಹೊರತು ಯಾರಿಗೂ ಕುಡಿಯುವ ನೀರು ಸಿಕಿಲ್ಲ. ಎತ್ತಿನಹೊಳೆ ಯೋಜನೆಯು ಅವೈಜ್ಞಾನಿಕವಾಗಿದೆ ಎಂದು ಹಲವು ಸಂಸ್ಥೆಗಳು ವರದಿ ನೀಡಿವೆ. ತ್ಯಾಜ್ಯ ನೀರನ್ನು 3ನೇ ಹಂತದಲ್ಲಿ ಶುದ್ಧೀಕರಿಸಿ ಕೆರೆ ತುಂಬಿಸಬೇಕು ಎಂಬ ಒತ್ತಾಯವನ್ನೂ ಸರ್ಕಾರಗಳು ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಷ್ಟು ದಿನ ಅನೇಕ ಹೋರಾಟಗಳು ಬಿಡಿ ಬಿಡಿಯಾಗಿ ಮಾಡಿದ್ದೇವೆ. ಇದೀಗ 3 ಜಿಲ್ಲೆಗಳನ್ನು ಒಗ್ಗೂಡಿಸಿ ಬೃಹತ್‌ ಕ್ರಾಂತಿಕಾರಿ ಹೋರಾಟ ರೂಪಿಸಲಿದ್ದೇವೆ. ಮೂರು ಜಿಲ್ಲೆಯ ಪ್ರಜ್ಞಾವಂತರು, ಬುದ್ಧಿ ಜೀವಿಗಳು ಸೇರಿದಂತೆ ಹಲವಾರು ಸಂಘಟನೆಗಳು ಒಂದಾಗಲಿವೆ ಎಂದು ತಿಳಿಸಿದರು.

ಇದೇ ವೇಳೆ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬೈಚಾಪುರ ಶಶಿಧರ್, ಹಸಿರು ಸೇನೆ ಯುವ ಘಟಕ ರಾಜ್ಯ ಘಟಕದ ಅಧ್ಯಕ್ಷ ವಿನೋದ್‌ಗೌಡ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್, ತತ್ತಮಂಗಲ ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.