ADVERTISEMENT

ದೇವನಹಳ್ಳಿ: ಪಾರಿವಾಟ ಗುಟ್ಟ ಉಳಿವಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 4:38 IST
Last Updated 29 ನವೆಂಬರ್ 2021, 4:38 IST
ದೇವನಹಳ್ಳಿ ಪಟ್ಟಣದ ಹಳೇ ತಾಲ್ಲೂಕು ಕಚೇರಿಯಿಂದ ಪಾರಿವಾಟ ಗುಟ್ಟದವರೆಗೆ ವಿವಿಧ ಸಂಘಟನೆಗಳಿಂದ ಗುಟ್ಟದ ಉಳಿವಿಗಾಗಿ ಪರಿಸರ ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ದೇವನಹಳ್ಳಿ ಪಟ್ಟಣದ ಹಳೇ ತಾಲ್ಲೂಕು ಕಚೇರಿಯಿಂದ ಪಾರಿವಾಟ ಗುಟ್ಟದವರೆಗೆ ವಿವಿಧ ಸಂಘಟನೆಗಳಿಂದ ಗುಟ್ಟದ ಉಳಿವಿಗಾಗಿ ಪರಿಸರ ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.   

ದೇವನಹಳ್ಳಿ:ಸಾವಿರಾರು ವರ್ಷಗಳ ಇತಿಹಾಸವಿರುವ ಪಾರಿವಾಟ ಗುಟ್ಟವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಬಳಿಸುತ್ತಿವೆ. ಇದನ್ನು ಉಳಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಬೇಕು. ನಾಗರಿಕರಿಗೆ ಅನುಕೂಲವಾದ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಪರಿಸರ ನಡಿಗೆ ಹೆಸರಿನಲ್ಲಿ ಭಾನುವಾರ ಕಾಲ್ನಡಿಗೆ ಜಾಥಾ ನಡೆಯಿತು.

ಪಟ್ಟಣದ ಹಳೇ ತಾಲ್ಲೂಕು ಕಚೇರಿಯಿಂದ ದೇವನಹಳ್ಳಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ, ನಾಗರಿಕ ಹಿತರಕ್ಷಣಾ ವೇದಿಕೆ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ನೇತೃತ್ವದಲ್ಲಿ ಪಾರಿವಾಟ ಗುಟ್ಟದವರೆಗೂ ಜಾಥಾ ನಡೆಸಿದ ಸ್ಥಳೀಯರು, ಗುಟ್ಟದಲ್ಲಿ ಸಸಿ ನೆಡುವ ಮೂಲಕ ಪಾರಿವಾಟ ಗುಟ್ಟ ನಮ್ಮದು, ಇದನ್ನು ಸಂರಕ್ಷಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಕೆ. ಶಿವಪ್ಪ ಮಾತನಾಡಿ, ದೇವನಹಳ್ಳಿಯ ಪ್ರಸಿದ್ಧ ತಾಣವಾಗಿರುವ ಪಾರಿವಾಟ ಗುಟ್ಟದ ಉಳಿವಿಗಾಗಿ ಹಲವಾರು ಸಂಘ, ಸಂಸ್ಥೆಗಳ ನೆರವಿನೊಂದಿಗೆ ಆಂಜನೇಯಸ್ವಾಮಿ ದೇಗುಲವಿರುವ ಸ್ಥಳದಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸುವ ಮೂಲಕ ಧಾರ್ಮಿಕತೆಗೆ ಯಾವುದೇ ದಕ್ಕೆಯಾಗದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ADVERTISEMENT

ಸಮುದಾಯವೊಂದಕ್ಕೆ ಈ ಜಾಗವನ್ನು ಗುತ್ತಿಗೆ ನೀಡಲಾಗಿದೆ. ಅವರು ಇದನ್ನು ನಮ್ಮ ಸ್ವಂತ ಜಾಗ ಎನ್ನುವಂತೆ ಅಭಿವೃದ್ಧಿಪಡಿಸಲು ಹೊರಟಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು. ಜಿಲ್ಲಾಧಿಕಾರಿ ಅವರು ನೇರವಾಗಿ ಸ್ಥಳ ಪರಿಶೀಲನೆ ನಡೆಸಿ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಈ ಜಾಗಕ್ಕೆ ನೀಡಿರುವ ಗುತ್ತಿಗೆ ರದ್ದುಗೊಳಿಸಿ, ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಅನೇಕ ವರ್ಷಗಳ ಇತಿಹಾಸ ಹೊಂದಿರುವ ಪಾರಿವಾಟ ಗುಟ್ಟದ ಮೇಲೆ ಪರಿಸರ ಸಂರಕ್ಷಿಸುವ ಮತ್ತು ಉಳಿಸುವ ಕಾರ್ಯ ಮಾಡಲಾಗುತ್ತಿದೆ. ಇಲ್ಲಿನ ವಾತಾವರಣ ಪಟ್ಟಣದಲ್ಲಿ ಎಲ್ಲಿಯೂ ಸಿಗುವುದಿಲ್ಲ. ಈ ಗುಟ್ಟದಲ್ಲಿ ನದಿಯೊಂದು ಇತ್ತು. ಈ ನೀರನ್ನು ದೇವನಹಳ್ಳಿ ಜನರು ಕುಡಿಯುವುದಕ್ಕೂ ಸಹ ಬಳಸುತ್ತಿದ್ದರು ಎಂದರು.

ಬರಗಾಲದ ಸಂದರ್ಭದಲ್ಲಿಯೂ ದೇವನಹಳ್ಳಿ ಜನರಿಗೆ ಇದು ಆಸರೆಯಾಗಿತ್ತು. ಪ್ರಾಣಿ, ಪಕ್ಷಿಗಳನ್ನು ಕಾಪಾಡುವಂತಹ ಕಾರ್ಯ ಮಾಡಲಾಗುತ್ತಿದೆ. ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಇರುವ ಸ್ಥಾನಮಾನ ಮತ್ತು ಪವಿತ್ರತೆ ಇಲ್ಲಿನ ಗವಿ ವೀರಭದ್ರಸ್ವಾಮಿ ದೇವಾಲಯಕ್ಕೂ ಇದೆ. ಅನೇಕ ಇತಿಹಾಸ ಹೊಂದಿರುವ ಜಾಗ ಇದಾಗಿದೆ ಎಂದು ಹೇಳಿದರು.

ಪರಿಸರ ಪ್ರೇಮಿ ಶಿವನಾಪುರ ರಮೇಶ್ ಮಾತನಾಡಿ, ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಖ್ಯಾತಿ ಹೊಂದಿದ್ದರೂ ಈ ಪ್ರದೇಶದಲ್ಲಿ ಯಾವುದೇ ಉದ್ಯಾನಗಳಿಲ್ಲ. ಜನರಿಗೆ ಆರೋಗ್ಯ ರಕ್ಷಣೆಗಾಗಿ ಗಿಡಗಳನ್ನು ಬೆಳೆಸಲು ಜಾಗದ ಕೊರತೆ ಇದೆ ಎಂದು ತಿಳಿಸಿದರು.

ಈಗ ಉಳಿದಿರುವ ಜಾಗ ಪಾರಿವಾಟ ಗುಟ್ಟ ಮಾತ್ರ. ಅದನ್ನು ಉಳಿಸದಿದ್ದರೆ ಭವಿಷ್ಯದಲ್ಲಿ ಸ್ಥಳೀಯರು ಉತ್ತಮ ಆರೋಗ್ಯ ಪಡೆಯಲು ಪರದಾಡುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಸ್ಥಳೀಯ ಶಾಸಕರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಶಿಕ್ಷಕ ಶ್ರೀರಾಮಯ್ಯ, ಪುಟ್ಟಸ್ವಾಮಿ, ನೆರಗನಹಳ್ಳಿ ಶ್ರೀನಿವಾಸ್, ಪೊಲೀಸ್ ಲೋಕೇಶ್, ಶಿವಾಜಿಗೌಡ, ಧನಂಜಯ್, ಸ್ಥಳೀಯರು, ಎನ್‌ಸಿಸಿ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.