ADVERTISEMENT

ಬಿಜೆಪಿ ಆಡಳಿತದ ಬಗ್ಗೆ ಜನರಿಗೆ ಅಸಮಾಧಾನವಿದೆ: ಎಚ್‌.ಡಿ.ಕುಮಾರಸ್ವಾಮಿ ‍

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 6:02 IST
Last Updated 3 ಡಿಸೆಂಬರ್ 2021, 6:02 IST
ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್‌ಗೌಡ ಅವರ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು
ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್‌ಗೌಡ ಅವರ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಆರು ಸ್ಥಾನ ಗೆಲ್ಲಲೇ ಬೇಕಾದ ಸವಾಲಿದೆ. ಮುಂದಿನ ವಿಧಾನಸಭೆ ಚುನಾವಣೆ ಜೆಡಿಎಸ್ ರಾಜಕೀಯ ಭವಿಷ್ಯಕ್ಕೆ ಬುನಾದಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಒಕ್ಕಲಿಗರ ಭವನದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಚುನಾವಣೆ ಜೆಡಿಎಸ್ ಅಭ್ಯರ್ಥಿ ಎಚ್.ಎಂ.ರಮೇಶ್‌ಗೌಡ ಅವರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

2018ರಿಂದ ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗಿಲ್ಲ. ಹೀಗಾಗಿ ಮೈತ್ರಿ ಸರ್ಕಾರ ರಚಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತದ ಬಗ್ಗೆ ಜನರಿಗೆ ಅಸಮಾಧಾನವಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ 120 ಕ್ಷೇತ್ರಗಳನ್ನು ಗೆಲ್ಲುವುದು ಪಕ್ಷದ ಗುರಿಯಾಗಿದೆ ಎಂದರು.

ADVERTISEMENT

ಯಾವುದೇ ಪಕ್ಷದ ಹಂಗಿಲ್ಲದೇ ಸ್ವತಂತ್ರ್ಯವಾಗಿ ಜೆಡಿಎಸ್ ಸರ್ಕಾರ ರಚನೆ ಮಾಡುವಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.

ಸರ್ಕಾರದಿಂದ ರೈತರ ನಿರ್ಲಕ್ಷ್ಯ: ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾಗಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಲ್ಲ. ರೈತರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕೋವಿಡ್‍ನಿಂದ ಸಂಕಷ್ಟಕ್ಕೊಳಗಾಗಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ಇದಕ್ಕೆ ಸಹಾಯ ಮಾಡುವ ಹೃದಯ ವೈಶಾಲ್ಯ ಸರ್ಕಾರಕ್ಕಿಲ್ಲ ಎಂದು ಅವರು ಟೀಕಿಸಿದರು.

ಪಂಚರತ್ನ ಯೋಜನೆ: ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಬಂದು 5ವರ್ಷ ಆಡಳಿತ ನೀಡಿದರೆ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಎಲ್‍ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ಕುಟುಂಬಕ್ಕ ಆರೋಗ್ಯ ಸೇವೆ ಕಲ್ಪಿಸಲಾಗುವುದು. ರೈತರಿಗೆ ಶಾಶ್ವತ ನೆರವು ನೀಡುವ ನೂತನ ಯೋಜನೆ, ಉದ್ಯೋಗ ಹಾಗೂ ವಸತಿ ಸೌಲಭ್ಯ ನೀಡುವ ಯೋಜನೆಗಳಿವೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್‍ಗೆ ಹೆಚ್ಚಿನ ಬಹುಮತ ದೊರಕುವ ವಿಶ್ವಾಸವಿದೆ. ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಮುಂದೆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರನ್ನಾಗಿ ಮಾಡುವುದಕ್ಕೆ ಹಿರಿಯ ಜೆಡಿಎಸ್ ಮುಖಂಡರಾದ ಅಪ್ಪಯ್ಯ ಹಾಗೂ ನರಸಿಂಹಯ್ಯ ಅವರ ಪಾತ್ರ ಮಹತ್ವದ್ದಾಗಿದೆ
ಎಂದರು.

ಜೆಡಿಎಸ್ ಅಭ್ಯರ್ಥಿ ಎಚ್.ಎಂ.ರಮೇಶ್‌ಗೌಡ ಮಾತನಾಡಿ, ದೊಡ್ಡಬಳ್ಳಾಪುರ ಜೆಡಿಎಸ್‍ಗೆ ಭದ್ರಕೋಟೆಯಾಗಿದೆ. ಆದರೆ, ಮುಖಂಡರ ನಡುವಿನ ಸಣ್ಣ ಭಿನ್ನಪ್ರಾಯ ಗೆಲುವಿಗೆ ಅಡ್ಡಿಯಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮೀಪತಿ,ನಗರ ಘಟಕದ ಅಧ್ಯಕ್ಷದ ವಿ.ಎಸ್.ರವಿಕುಮಾರ್, ಎಪಿಎಂಸಿ ಉಪಾಧ್ಯಕ್ಷ ಲೋಕೇಶ್,ಹಿರಿಯ ಮುಖಂಡರಾದ ವೇಣುಗೋಪಾಲ್, ಎಚ್.ಅಪ್ಪಯ್ಯ,ಎ.ನರಸಿಂಹಯ್ಯ, ಹರೀಶ್‌ಗೌಡ, ಸುನಿಲ್‌ಕುಮಾರ್,ಡಾ.ಎಚ್.ಜಿ.ವಿಜಯಕುಮಾರ್,ಆಂಜನಗೌಡ, ಆನಂದ್, ಲೋಕೇಶ್‌ಬು,ದೇವರಾಜಮ್ಮ, ಜೆಡಿಎಸ್‌ ತಾಲ್ಲೂಕು ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸಿ.ಮನೋಹರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.