
ಹೊಸಕೋಟೆ: ತಾಲ್ಲೂಕು ವಕೀಲರ ಸಂಘ ಇಲ್ಲಿಯ ನ್ಯಾಯಾಲಯದ ಆವರಣದಲ್ಲಿ ಕನಕದಾಸರ 538ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿತು
ಜಾತಿ ಎಂಬ ಪಿಡುಗಿನ ವಿರುದ್ಧ ಕನಕದಾಸ ತಮ್ಮ ಕೀರ್ತನೆಗಳ ಮೂಲಕ ಭಕ್ತಿಮಾರ್ಗದಲ್ಲಿ ಹೋರಾಡಿದ ಸಂತ ಶ್ರೇಷ್ಠ. ಆದರೆ, ಇಂದು ಅವರನ್ನೇ ಜಾತಿಯ ಸಂಕೋಲೆಯಲ್ಲಿ ಬಂಧಿಸಿರುವುದು ದುರಂತ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ಜಿ. ವಿಷಾದಿಸಿದರು.
ಕುಲ ಕುಲ ಎಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎಂದು ಜಾತಿಯ ಕಟ್ಟುಪಾಡುಗಳ ಸಂಕೋಲೆಗಳನ್ನು ವಿಡಂಬನೆ ಮಾಡಿದ ಕನಕದಾಸರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು ಎಂದು ಸಲಹೆ ಮಾಡಿದರು.
ಆತ್ಮ ,ಜೀವ ,ಗಾಳಿ, ನೀರು, ಅನ್ನ ಯಾವ ಕುಲ ಎಂದು ಹೇಳಿರಿ ಎಂದು ಕನಕದಾಸರು ಅಂದಿನ ದಿನಗಳಲ್ಲೇ ವ್ಯವಸ್ಥೆಯನ್ನು ಪ್ರಶ್ನಿಸುವ ಪ್ರಗತಿಪರ ಮತ್ತು ವೈಚಾರಿಕ ಮನೋಭಾವ ಹೊಂದಿದ್ದರು. ಇದನ್ನು ಅರ್ಥ ಮಾಡಿಕೊಂಡರೆ ಮಾನವ ಕುಲ ಅರ್ಥಪೂರ್ಣ ಬದುಕಿನತ್ತ ಹೆಜ್ಜೆ ಹಾಕುತ್ತದೆ ಎಂದು ಅಭಿಪ್ರಾಯಪಟ್ಟರು.
ಕನಕದಾಸರು ಜಾತಿ ವ್ಯವಸ್ಥೆಯ ಕಟು ವಿರೋಧಿಯಾಗಿದ್ದರು. ಮನುಷ್ಯನಿಗೆ ಗುಣ ಮುಖ್ಯವೇ ಹೊರತು ಆತ ಹುಟ್ಟಿದ ಕುಲವಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದರು ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರಮೇಶ್ ಕೆ. ಅಭಿಪ್ರಾಯಪಟ್ಟರು.
ವರ್ಗ ರಹಿತ ಮತ್ತು ಭೇದ,ಭಾವವಿಲ್ಲದ ಸಮಾಜ ಕಲ್ಪಿಸಿಕೊಂಡಿದ್ದರು. ಅಂಧ ವಿಶ್ವಾಸ ಮತ್ತು ಅರ್ಥಹೀನ ಧಾರ್ಮಿಕ ಆಚರಣೆಗಳನ್ನು ಕಟುವಾಗಿ ಟೀಕಿಸಿದ್ದರು. ಜನರು ತಾರ್ಕಿಕವಾಗಿ ಯೋಚಿಸುವಂತೆ ಮತ್ತು ಮೌಢ್ಯಗಳಿಗೆ ಬಲಿಯಾಗದಂತೆ ಕೀರ್ತನೆಗಳ ಮೂಲಕ ಭೊದಿಸಿದ್ದರು ಎಂದರು.
ಮೈಮೇಲಿನ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಒಣಗಿಸಿಕೊಂಡರೆ ಮೈಲಿಗೆ ಹೋದಂತಲ್ಲ. ನಮ್ಮ ಅಂತರಾಳದ ಕಾಮ, ಕ್ರೋಧಗಳನ್ನು ತ್ಯಜಿಸಿದರೆ ನಿಜವಾದ ಮೈಲಿಗೆ ಕಳಚಿದಂತೆ ಎಂದು ಪ್ರತಿಪಾದಿಸಿದ ದಾಸ ಶ್ರೇಷ್ಠರು ಎಂದರು.
ರಾಜ್ಯ ಚುನಾವಣಾ ಆಯುಕ್ತ ಸಂಗ್ರೇಶಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ ಬಿ., ಅಪರ ಸಿವಿಲ್ ನ್ಯಾಯಾಧೀಶ ಶಿಲ್ಪಶ್ರೀ ಎನ್. ಎಸ್., ತಹಶೀಲ್ದಾರ್ ಸೋಮಶೇಖರ್, ಸಹಾಯಕ ಅಭಿಯೋಜಕಿ ನಿರ್ಮಲಾ ಕುಮಾರಿ ಎಂ., ಸಹಾಯಕ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್, ಉಪಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಜಂಟಿ ಕಾರ್ಯದರ್ಶಿ ಆನಂದ್, ಖಜಾಂಚಿ ರುಕ್ಮಿಣಿ ಎಂ, ಇಂದ್ರಾಣಿ, ಜಯಲಕ್ಷ್ಮಮ್ಮ, ಅವಿನಾಶ್, ನರಸಿಂಹಮೂರ್ತಿ, ಪದ್ಮ, ರವೀಂದ್ರ, ಸತ್ಯನಾರಾಯಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.