ADVERTISEMENT

ಅನ್ಯ ಭಾಷಿಕರಿಗೆ ಕನ್ನಡ ಕಲಿಸಿ: ಮೋಹನ್ ಬಾಬು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 6:14 IST
Last Updated 30 ನವೆಂಬರ್ 2021, 6:14 IST
ವಿಜಯಪುರ ಹೋಬಳಿಯ ಮುದುಗುರ್ಕಿ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಕಲಾವಿದರ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮುಖಂಡರು ಪಾಲ್ಗೊಂಡಿದ್ದರು
ವಿಜಯಪುರ ಹೋಬಳಿಯ ಮುದುಗುರ್ಕಿ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಕಲಾವಿದರ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮುಖಂಡರು ಪಾಲ್ಗೊಂಡಿದ್ದರು   

ವಿಜಯಪುರ:‘ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ವಿಶ್ವದ ನಾನಾ ಪ್ರದೇಶಗಳಲ್ಲಿ ದೊರೆತ ಅಚ್ಚ ಕನ್ನಡ ಶಾಸನಗಳು ಕನ್ನಡದ ಪ್ರಾಚೀನತೆಯನ್ನು ಸಾಬೀತುಪಡಿಸಿವೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಒಲಿದಿರುವುದು ನಮ್ಮೆಲ್ಲರ ಹೆಮ್ಮೆ’ ಎಂದು ಕನ್ನಡ ಕಲಾವಿದರ ಸಂಘದ ತಾಲ್ಲೂಕು ಅಧ್ಯಕ್ಷ ಮೋಹನ್ ಬಾಬು ಹೇಳಿದರು.

ಹೋಬಳಿಯ ಮುದುಗುರ್ಕಿ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಕಲಾವಿದರ ಸಂಘದಿಂದ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದ ಅವರು, ಹೊರ ರಾಜ್ಯಗಳಿಂದ ಬಂದು ನೆಲೆಸಿರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಮೂಲಕ ಮಾತೃಭಾಷೆಯ ಹಿರಿಮೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ರಾಜ್ಯೋತ್ಸವವನ್ನು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸಬಾರದು. ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹುರಳಗುರ್ಕಿ ಶ್ರೀನಿವಾಸ್, ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ. ನಾರಾಯಣಸ್ವಾಮಿ ಮಾತನಾಡಿದರು.

ತಾಲ್ಲೂಕು ಕಲಾವಿದರ ಸಂಘದ ವಿ. ಮಂಜುನಾಥ್, ಕೆ. ಪ್ರದೀಪ್ ಕುಮಾರ್, ಕೆ. ಹರಿ, ಎಚ್.ಎಸ್. ಶ್ರೀನಾಥ್, ಆನಂದ್, ವೆಂಕಟೇಶ್, ಶಂಕರ್, ಸತ್ಯನಾರಾಯಣ್, ಸುರೇಶ್, ರೇಖಾ ನಾರಾಯಣಸ್ವಾಮಿ, ಮಾರಪ್ಪ,ವಿ. ಗೋವಿಂದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.