ADVERTISEMENT

‘ಕನ್ನಡ ಜನಪದ ಸೊಗಡು ಸಾಹಿತ್ಯಕ್ಕೆ ಪ್ರೇರಣೆ’

ಸಾಹಿತ್ಯ, ಧಾರ್ಮಿಕ, ಸಂಸ್ಕೃತಿ ಮತ್ತು ಪರಿಸರ ಕುರಿತು ಒಂದು ಅವಲೋಕನ ಮತ್ತು ಸಂವಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 13:36 IST
Last Updated 5 ಅಕ್ಟೋಬರ್ 2019, 13:36 IST
ಸಾಲು ಮರದ ತಿಮ್ಮಕ್ಕ ಸಸಿ ನೆಟ್ಟರು
ಸಾಲು ಮರದ ತಿಮ್ಮಕ್ಕ ಸಸಿ ನೆಟ್ಟರು   

ದೇವನಹಳ್ಳಿ: ‘ಐದು ಸಾವಿರ ವರ್ಷಗಳಿಂದ ಕನ್ನಡ ನಾಡಿನ ನೆಲದ ಜನಪದ ಸೊಗಡು ಸಾಹಿತ್ಯಕ್ಕೆ ಪ್ರೇರಣೆಯಾಗಿದೆ’ ಎಂದು ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ವ ಶಕ್ತ್ಯಾತ್ಮಕ ಚೌಡೇಶ್ವರಿ ದೇವಿ ದೇವಾಲಯದ ಆವರಣದಲ್ಲಿ ನಡೆದ ಸಾಹಿತ್ಯ, ಧಾರ್ಮಿಕ, ಸಂಸ್ಕೃತಿ ಮತ್ತು ಪರಿಸರ ಕುರಿತು ಒಂದು ಅವಲೋಕನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಡುಭಾಷೆಯಲ್ಲಿನ ಪದಗಳ ಜೋಡಣೆಯನ್ನಾಧರಿಸಿ ತಮ್ಮ ದೈನಂದಿನ ಬದುಕಿನ ಕಷ್ಟ, ಸುಖ, ಸಂಬಂಧ, ಅನುಭವಗಳನ್ನೇ ಜನಪದರು ಪದವಾಗಿಸಿದವರು. ಅವರು ಅಕ್ಷರ ಜ್ಞಾನ ಹೊಂದಿವರಲ್ಲ. ಆದರೂ ಸಾರ್ವಕಾಲಿಕ ಪದ ಕಟ್ಟಿ ಹಾಡಿದವರು’ ಎಂದರು.

ADVERTISEMENT

‘ಕಾಡಿನಲ್ಲಿ ವಾಸವಿದ್ದು ತಮ್ಮದೇ ಲೋಕ ಸೃಷ್ಟಿಸಿಕೊಂಡು ನಿಸರ್ಗದ ಮಡಿಲಿನಲ್ಲಿ ಬೆಳೆದು, ಅನೇಕ ವನೌಷಧಿಗಳನ್ನು ಪರಿಚಯಿಸಿ ಜಗತ್ತಿಗೆ ಕೊಡುಗೆ ನೀಡಿದವರು ಬುಡಕಟ್ಟು ಜನಾಂಗ. ಪ್ರಕೃತಿ ನಾಶವಾಗಲು ಮಾನವನ ದುರಾಸೆಯೇ ಕಾರಣ. ಬರಗಾಲಕ್ಕೆ ಪ್ರತಿಯೊಬ್ಬರೂ ಜವಾಬ್ದಾರರು. ಸಾಲುಮರದ ತಿಮ್ಮಕ್ಕ ಅನಕ್ಷರಸ್ಥೆ. ಆದರೆ ಅವರಿಗಿರುವ ಪರಿಸರ ಕಾಳಜಿ ಎಲ್ಲರಲ್ಲೂ ಇಲ್ಲ’ ಎಂದು ಹೇಳಿದರು.

‘ಸಾಹಿತ್ಯ ರಚನೆ ನನ್ನ ಹವ್ಯಾಸ. ಈವರೆಗೆ 600 ಚಲನಚಿತ್ರಗಳಿಗೆ 3 ಸಾವಿರ ಸಾಹಿತ್ಯ ಗೀತೆಗಳನ್ನು ರಚಿಸಿದ್ದೇನೆ.ಕುವೆಂಪು ನನಗೆ ಪ್ರೇರಣೆ. ಇಂದಿನ ವಾಸ್ತವ ಜೀವನದ ಬಗ್ಗೆ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು. ಭವಿಷ್ಯದ ಬಗ್ಗೆ ಚಿಂತಿಸಬೇಕು’ ಎಂದರು.

‘ರಾಜಕೀಯ ವ್ಯಕ್ತಿಗಳಲ್ಲಿ ಜಾಣ ಕುರುಡು, ಜಾಣ ಕಿವುಡು, ದ್ವಿಮುಖ ನೀತಿ ಇರುತ್ತದೆ. ಮತಗಳನ್ನು ಮಾರಿಕೊಳ್ಳಬಾರದು. ಮಾರಿಕೊಂಡರೆ ಪ್ರಶ್ನಿಸುವ ನೈತಿಕತೆ ಇರುವುದಿಲ್ಲ. ಸತ್ಯ ಸಮಾಧಿ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅಸ್ಪೃಶ್ಯತೆ ಜೀವಂತವಿದೆ. ಮಲಹೊರುವ ಪದ್ಧತಿ ಇನ್ನೂ ಹಸಿಯಾಗಿದೆ. ಸಾಮಾಜಿಕ ಅನಿಷ್ಟ ಪದ್ಧತಿಗಳ ಬಗ್ಗೆ ಜಾಗೃತಿ ಅಗತ್ಯ’ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಪರಿಸರ ಸಂರಕ್ಷಕಿ ಸಾಲು ಮರದ ತಿಮ್ಮಕ್ಕ ಇತರರಿಗೆ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. ಅವರ ಸಾಮಾಜಿಕ ಕಳಕಳಿ ಬೆಳೆಸಿದ ಮರಗಳಷ್ಟೇ ಶಾಶ್ವತ. ಪ್ರತಿಯೊಬ್ಬರೂ ತಿಮ್ಮಕ್ಕನ ಪರಿಸರ ಉಳಿಸುವ ಮಾರ್ಗವನ್ನು ಅನುಸರಿಸಬೇಕು’ ಎಂದರು.

ಅರ್ಚಕ ರವಿ ಆಚಾರ್ಯ, ಶಂಖನಾದ ಚಲನಚಿತ್ರ ನಟ ಆಂಜಿನಪ್ಪ, ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಅಶ್ವಥನಾರಾಯಣ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತ ಕುಮಾರಿ, ಅಶ್ವಥ್ ಗುರೂಜಿ, ಮುಖಂಡ ಸತ್ಯನಾರಾಯಣಾಚಾರ್, ಗಂಗಾಧರ್, ಶ್ರೀರಾಮಯ್ಯ, ಜಯರಾಮ್, ಹನುಮಂತಪ್ಪ, ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.