ADVERTISEMENT

ಎಲ್ಲೆಡೆ ಪಸರಿಸಲಿ ನಲ್ನುಡಿ ಘಮಲು: ಶಾಸಕ ಧೀರಜ್ ಮುನಿರಾಜು

ಎಲ್ಲರ ಮನೆ ಮೇಲೆ ನಾಡಧ್ವಜ: ನಿಯಮ ರೂಪಿಸಲು ಶಾಸಕ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 1:50 IST
Last Updated 2 ನವೆಂಬರ್ 2025, 1:50 IST
ದೊಡ್ಡಬಳ್ಳಾಪುರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ನಡೆದ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು
ದೊಡ್ಡಬಳ್ಳಾಪುರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ನಡೆದ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ದೊಡ್ಡಬಳ್ಳಾಪುರ: ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಯುವ ಸಮುದಾಯದಲ್ಲಿ ಅರಿವು ಮೂಡಿಸಬೇಕು. ಶಾಲೆ–ಕಾಲೇಜುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡದ ಆಸ್ಮಿತೆಯನ್ನು ಪಸರಿಸಬೇಕಿದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಭಾಷೆಯ ಬೆಳೆವಳಿಗೆಗೆ ಎಲ್ಲರು ಶ್ರಮಿಸಬೇಕು. ಸರ್ಕಾರ ಇದೇ ಪ್ರಥಮ ಬಾರಿಗೆ ರಾಜ್ಯದ ಎಲ್ಲಾ ಮನೆಗಳ ಮೇಲೂ ಕನ್ನಡ ಭಾವುಟ ಹಾರಿಸುವ ಮೂಲಕ ರಾಜ್ಯೋತ್ಸವ ಸಂಭ್ರಮವನ್ನು ಆಚರಿಸಿ ಆ ಮೂಲಕ ಎಲ್ಲೆಡೆ ಕನ್ನಡದ ವಾತಾವರಣ ನಿರ್ಮಾಣಕ್ಕೆ ಪೂರಕವಾಗಬೇಕು. ಕನ್ನಡ ನಾಡು ನುಡಿ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕಟಿಬದ್ದರಾಗಬೇಕು ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಕುವೆಂಪು ಅವರ ನಾಡಗೀತೆಗೆ 100 ವರ್ಷಗಳಾಗಿದ್ದು, ನಾಡಗೀತೆಯ ಮಹತ್ವ ಎಲ್ಲರೂ ಅರಿಯಬೇಕಿದೆ. ಸ್ವಾತಂತ್ರ್ಯ ಹೋರಾಟ ಹಾಗೂ ಭಾಷಾ ಹೋರಾಟಗಳಲ್ಲಿ ದೊಡ್ಡಬಳ್ಳಾಪುರದ ಮಹನೀಯರಾದ ಟಿ.ಎಸ್.ಸಿದ್ದಲಿಂಗಯ್ಯ, ಮುಗುವಾಳಪ್ಪ, ರುಮಾಲೇ ಚನ್ನಬಸವ್ಯ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಶಿವಪ್ಪ, ಡಿ.ಆರ್.ನಾಗರಾಜ್ ಸೇರಿದಂತೆ ಹಲವಾರು ಮಹನೀಯರ ಕೊಡುಗೆ ಸ್ಮರಣೀಯ ಎಂದರು.

ಈ ಬಾರಿ ಸಿಂಪಾಡಿಪುರದ ವೀಣೆ ತಯಾರಕ ಪೆನ್ನ ಓಬಳಯ್ಯ, ವಡಗೆರೆ ಡಾ.ಜಯರಂಗನಾಥ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಹೆಮ್ಮೆಯ ಸಂಗತಿ ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದಕುಮಾರ್, ಉಪಾಧ್ಯಕ್ಷ ಎಂ.ಮಲ್ಲೇಶ್, ತಹಶೀಲ್ದಾರ್ ವಿಭಾವಿದ್ಯಾರಾಥೋಡ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹರ್ತಿ, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗವಹಿಸಿದ್ದರು.

ಸಮಾರಂಭಕ್ಕೂ ಮುನ್ನ ತಾಲ್ಲೂಕು ಕಚೇರಿ ಬಳಿಯಿಂದ ವೇದಿಕೆಯವರೆಗೆ ಭುವನೇಶ್ವರಿ ದೇವಿ ಮೆರವಣಿಗೆ ನಡೆಯಿತು.

ಸಾವಿರ ಸ್ವರಗಳ ಸಂಗಮ: ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಗೆ ನೂರು ವರ್ಷ ತುಂಬಿದ್ದು, ಈ ಸಂಭ್ರಮವನ್ನು ದೊಡ್ಡಬಳ್ಳಾಪುರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶಾಲಾ ಶಿಕ್ಷಕರು ಹಾಗೂ ವಿವಿಧ ಶಾಲೆಗಳ ಸಾವಿರ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ರಾಜ್ಯೋತ್ಸವದಲ್ಲಿ ನೂರಾರು ಜನ ವಿದ್ಯಾರ್ಥಿಗಳು ನಾಡ ಗೀತೆ ಹಾಡಿದರು

ಸಾಧಕರಿಗೆ ಗೌರವ

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹೋರಾಟಗಾರ ಹಿರಿಯ ಪತ್ರಕರ್ತ ಎನ್‌.ಎಂ.ನಟರಾಜ್ (ಡಾ. ವೆಂಕಟರೆಡ್ಡಿ ಜೀವಮಾನ ಪ್ರಶಸ್ತಿ ಕನ್ನಡ ಕಟ್ಟಾಳು) ಹರಿಕುಮಾರ್‌.ಬಿ.ಪಿ ಬೋರಗೌಡ.ಎಂ.ಜಿ ಪ್ರಕಾಶ್‌ ರಾವ್‌.ಎಚ್ ನಾಗರಾಜ್‌.ಆರ್‌ ಮಹದೇವ್‌.ಆರ್‌.ಎಂ ನಾಗರಾಜು.ಎಂ (ಕನ್ನಡದ ಕಟ್ಟಾಳುಗಳು) ವೆಂಕಟರಾಜು.ಎಸ್ (ಪತ್ರಿಕೋದ್ಯಮ) ಹೇಮಂತ್‌ (ಕ್ರೀಡೆ) ಕೃಷ್ಣಪ್ಪ (ಯೋಗ) ವೆಂಕಟೇಶ್‌.ವಿ(ನಾಟಕ) ಎಸ್.ಎನ್‌.ದೇವರಾಜು (ಸಂಗೀತ) ಖಾದರ್‌ ಬೇಗ್ (ಯೋಧರು) ಅವರನ್ನು ಸತ್ಕರಿಸಲಾಯಿತು. ಮಹಿಳಾ ಸಾಧಕರಾದ ಲೇಖಕಿ ಕೆ.ಎಸ್‌.ಪ್ರಭಾ ಶಿಕ್ಷಣ ಇಲಾಖೆಯ ಜಯಶ್ರೀ.ಕೆ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಅಶ್ವಿನಿ ಪಂಚಾಯತಿ ಅಭಿವೃದ್ಧಿ ಇಲಾಖೆಯ ಸೌಮ್ಯ ನಗರಸಭೆ ಅಧಿಕಾರಿ ಕೆ.ಎಸ್. ಸಂಧ್ಯಾ ಕುಮಾರಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.