ವಿಜಯಪುರ(ದೇವನಹಳ್ಳಿ): ಪಟ್ಟಣದ ರಾಜೀವ್ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಅಖಿಲ ಕರ್ನಾಟಕ ಮಿತ್ರ ಸಂಘದಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಿದರು.
ಶಾಲೆಯ ವಿದ್ಯಾರ್ಥಿಗಳು ಕಾರ್ಗಿಲ್ ಯುದ್ಧದಲ್ಲಿ ಮಡಿದಿರುವ ಯೋಧರಿಗೆ ನಮನಗಳು ಸಲ್ಲಿಸಿದರು.
ಅಖಿಲ ಕರ್ನಾಟಕ ಮಿತ್ರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತೀಯ ಯೋಧರು ಇತಿಹಾಸ ಸೃಷ್ಟಿಸಿದ್ದಾರೆ. ಹೆಮ್ಮೆಯ ಸೈನಿಕ ಹೋರಾಟವನ್ನು ಪ್ರತಿಯೊಬ್ಬ ಭಾರತೀಯರು ಸ್ಮರಿಸಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕ ಎ.ಎಂ.ನಾರಾಯಣಸ್ವಾಮಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ್ದ ಭಾರತೀಯ ಯೋಧರು, ಪಾಕಿಸ್ತಾದ ಸೈನ್ಯವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದರು. ಇದರ ಫಲವಾಗಿ ತನ್ನ ಭೂ ಪ್ರದೇಶದಲ್ಲಿ ಭಾರತ ಹಿಡಿತ ಸಾಧಿಸಿತು. 1999ರ ಜುಲೈ 26 ರಂದು ಟೈಗರ್ ಹಿಲ್ ಅನ್ನು ವಶಪಡಿಸಿಕೊಳ್ಳುವುದರೊಂದಿಗೆ ಯುದ್ಧ ಕೊನೆಗೊಂಡಿತ್ತು. ಯುದ್ಧದಲ್ಲಿ ಭಾರತ ವಿಜಯ ಗಳಿಸಿತು ಎಂದು ವಿವರಿಸಿದರು.
ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ರಕ್ಷಿಸಲು ಅದೆಷ್ಟೋ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. 490 ಸೈನಿಕರು ವೀರ ಮರಣ ಹೊಂದಿದರು ಎಂದರು.
ಸಂಘದ ಕಾರ್ಯಾಧ್ಯಕ್ಷ ವಿ. ವಿಶ್ವನಾಥ್, ಮುರಳಿಧರ್, ಸಹ ಶಿಕ್ಷಕ ಬೈರೇಗೌಡ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.