ADVERTISEMENT

ಸಂತೆಗೇಟ್‌–ಕಟ್ಟಿಗನಹಳ್ಳಿ |ಎಲ್ಲಿ ನೋಡಿದರೂ ಗುಂಡಿಗಳು: ಅಪಾಯಕಾರಿ ಹೆದ್ದಾರಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:04 IST
Last Updated 6 ಸೆಪ್ಟೆಂಬರ್ 2025, 2:04 IST
   

ಹೊಸಕೋಟೆ: ಸಂತೆಗೇಟ್‌ನಿಂದ ಜಡಿಗೇನಹಳ್ಳಿ ಹೋಬಳಿಯ ಕಟ್ಟಿಗನಹಳ್ಳಿ ಮಾರ್ಗವಾಗಿ ಸಾಗುವ ರಾಜ್ಯ ಹೆದ್ದಾರಿ–95 ಅಪಾಯಕಾರಿಯಾಗಿದೆ.

ರಸ್ತೆ ಉದ್ದಕ್ಕೂ ಗುಂಡಿಗಳೇ ಆವರಿಸಿದ್ದು, ವಾಹನ ಸವಾರರು ಎಚ್ಚರದಿಂದ ಸಂಚರಿಸದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ರಸ್ತೆ ಬದಿಯೇ ಕಸ ಸುರಿಯುವುದರಿಂದ ಕೊಳೆತು ದುರ್ನಾತ ಬೀರುತ್ತಿದೆ. ಸವಾರರು ಮೂಗು ಮುಚ್ಚಿಕೊಂಡು ಸಂಚರಿಸಲೇ ಬೇಕು.

ಹೆದ್ದಾರಿಯ ಎರಡೂ ಬದಿಯಲ್ಲಿ ಪ್ರತಿನಿತ್ಯ ಮಾಲೂರು ಮತ್ತು ಹೊಸಕೋಟೆ ಕಡೆಗೆ ಕಂಪನಿ, ಮತ್ತಿತರ ಕೆಲಸಗಳಿಗೆ ಹೋಗುವವರು ರಸ್ತೆ ಪಕ್ಕದಲ್ಲೇ ಕಸ ಸುರಿಯುತ್ತಾರೆ. ಇದರಿಂದ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದೆ. ಸೂಕ್ತ ಸಮಯದಲ್ಲಿ ವಿಲೇವಾರಿಯಾಗದೆ ಗಬ್ಬುದ್ದೆ ನಾರುತ್ತಿದೆ. ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ. ವಿಂಗಡಿಸಿದ ಎಲ್ಲ ರೀತಿಯ ತ್ಯಾಜ್ಯ ಒಂದೆಡೆ ಕೊಳೆಯುತ್ತಿರುವುದರಿಂದ ಸ್ಥಳೀಯ ಗ್ರಾಮಸ್ಥರಲ್ಲಿ ಕಾಯಿಲೆ ಭೀತಿ ಶುರುವಾಗಿದೆ.

ರಸ್ತೆ ಮಧ್ಯ ಮತ್ತು ಎರಡು ಬದಿಯಲ್ಲಿ ಗುಂಡಿಗಳೇ ಆವರಿಸಿದ್ದು, ವಾಹನ ಸವಾರರು ಸರ್ಕಸ್‌ ಮಾಡುತ್ತಾಲೇ ಸಾಗಬೇಕಿದೆ. ಇನ್ನೂ ಮಳೆ ಬಂದರೆ ಗುಂಡಿ ಮತ್ತು ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡು ರಸ್ತೆ ಯಾವುದು?, ಗುಂಡಿ ಯಾವುದು? ಎಂಬುದೇ ತಿಳಿಯುವುದಿಲ್ಲ. ಮಳೆ ಬಂದಾಗ ದ್ವಿಚಕ್ರ ವಾಹನ ಸವಾರರು ಬಿದ್ದಿರುವ ಉದಾರಹಣೆಗಳೂ ಇವೆ.

ಹೆದ್ದಾರಿಯ ಗುಂಡಿಗಳು ಅಪಾಯ ಆಹ್ವಾನಿಸುತ್ತಿವೆ. ದೊಡ್ಡ ಅಪಘಾತ ಸಂಭವಿಸುವ ಮುನ್ನವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಮಾಡಿಸಬೇಕೆಂದು ಉಪನ್ಯಾಸಕ ಸುರೇಶ್ ಒತ್ತಾಯಿಸಿದ್ದಾರೆ.

ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ

ಕಟ್ಟಿಗೆನಹಳ್ಳಿ ಗ್ರಾಮ ಹೊಸಕೋಟೆ ತಾಲೂಕಿನ ಗಡಿ. ಕಟ್ಟಿಗೆನಹಳ್ಳಿಯಿಂದ ಮಾಲೂರಿಗೆ ಸಾಗುವ ರಾಜ್ಯ ಹೆದ್ದಾರಿ –95ರಲ್ಲಿ ದ್ವಿಪಥವು ಸುಸಜ್ಜಿತವಾಗಿದ್ದರೆ ಕಟ್ಟಿಗೆನಹಳ್ಳಿಯಿಂದ ಹೊಸಕೋಟೆಯ ಸಂತೆಗೇಟ್ ವರೆಗಿನ ರಸ್ತೆಯಲ್ಲಿ ಗುಂಡಿಗಳೇ ಆವರಿಸಿದೆ. ಒಂದೇ ಹೆದ್ದಾರಿ ಒಂದು ತಾಲ್ಲೂಕಿನಲ್ಲಿ ಚೆನ್ನಾಗಿದ್ದರೆ, ಮತ್ತೊಂದು ತಾಲ್ಲೂಕು ವ್ಯಾಪ್ತಿಯಲ್ಲಿ ಹದಗೆಟ್ಟಿದೆ. ಇದು ಅಧಿಕಾರಿಗಳ  ಕಾರ್ಯವೈಖರಿ ಹಾಗೂ ಸ್ಥಳೀಯ ರಾಜಕೀಯ ನಾಯಕರಲ್ಲಿರುವ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ ಎನ್ನುತ್ತಾರೆ  ದೊಡ್ಡದೇನಹಳ್ಳಿ ಗ್ರಾಮದ ಚೇತನ್.

ರೋಗಿಗಳು ನಮ್ಮ ಮೇಲೆ ನಂಬಿಕೆ ಇಟ್ಟು ಹೊಸಕೋಟೆ ಮತ್ತು ಬೆಂಗಳೂರಿನ ಆಸ್ಪತ್ರೆಗಳಿಗೆ ಆಂಬುಲೆನ್ಸ್‌ನಲ್ಲಿ ತೆರಳಲು ಬರುತ್ತಾರೆ. ಆದರೆ ಈ ಹದಗೆಟ್ಟ ರಸ್ತೆಯಲ್ಲಿ ಸಾಗಿದರೆ ರೋಗಿ ಆಸ್ಪತ್ರೆ ಸೇರುವ ಮುನ್ನವೇ ಪ್ರಾಣ ಬಿಡಬೇಕಾಗುತ್ತದೆ.
ಮಂಜು, ಆಂಬುಲೆನ್ಸ್ ಚಾಲಕ, ಮಾಲೂರು
ಮಾಲೂರಿನಿಂದ ಹೊಸಕೋಟೆಗೆ ಈ ಹದೆಗೆಟ್ಟ ರಸ್ತೆಯಲ್ಲಿ ಸಂಚರಿಸುವಾಗ ಯಾವಾಗ ಏನಾಗುತ್ತೋ ಎಂಬ ಭಯದಲ್ಲೇ ನಿತ್ಯ ಬೈಕ್‌ ಓಡಿಸಬೇಕು. ಈ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತದೋ?
ವೆಂಕಟೇಶ್, ಉಪನ್ಯಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.