
ದೇವನಹಳ್ಳಿ: ಕಾಯಕ ಹಾಗೂ ದಾಸೋಹದ ಪರಿಕಲ್ಪನೆ 12ನೇ ಶತಮಾನದ ಶರಣರು ನೀಡಿದ ಮಹತ್ವದ ಕೊಡುಗೆ ಎಂದು ತಹಶೀಲ್ದಾರ್ ಎಂ.ಅನಿಲ್ ಹೇಳಿದರು.
ತಾಲ್ಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾ.ಪಂ ವತಿಯಿಂದ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯಲ್ಲಿ ಮಾತನಾಡಿದರು.
ಕಾಯಕ ಶರಣರ ಆದರ್ಶಗಳನ್ನು ಪಾಲಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಹೊರಬಂದು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಸೇರಿದಂತೆ ಕಾಯಕ ಶರಣರು ತಮ್ಮ ಕಾಯಕದಿಂದಲೇ ಗುರುತಿಸಿಕೊಂಡವರು. ಕಾಯಕದ ಮೂಲಕವೇ ಅವರು ಕೈಲಾಸವನ್ನು ಕಂಡರು ಎಂದು ಹೇಳಿದರು.
ಕಾಯಕ ಶರಣರು ಹಾಕಿಕೊಟ್ಟ ಮಾರ್ಗದರ್ಶನ, ವಿಚಾರಧಾರೆ ಹಾಗೂ ಅವರ ಬದುಕು–ಬರವಣಿಗೆಗಳ ನಡುವೆ ಸಾಮ್ಯತೆ ಕಂಡುಬರುತ್ತದೆ. ಕಾಯಕ ತತ್ವಕ್ಕೆ ಆದ್ಯತೆ ನೀಡಿ ಬದ್ಧತೆಯಿಂದ ಬದುಕು ನಡೆಸಿದ 12ನೇ ಶತಮಾನದ ಶರಣರ ನಡೆ–ನುಡಿಗಳು ಒಂದಾಗಿದ್ದವು ಎಂದು ತಿಳಿಸಿದರು.
12ನೇ ಶತಮಾನದ ವಚನ ಚಳವಳಿಯನ್ನು ಸುವರ್ಣಯುಗವೆಂದು ಕರೆಯಲಾಗುತ್ತದೆ. ಕಾಯಕ ಎಂದರೆ ಕೇವಲ ಜೀವನೋಪಾಯಕ್ಕಾಗಿ ಕೈಗೊಂಡ ವೃತ್ತಿಯಲ್ಲ; ಪ್ರತಿಯೊಂದು ವೃತ್ತಿಯನ್ನೂ ಗೌರವಯುತವಾಗಿ ಕಾಣುವುದೇ ಕಾಯಕ ಎಂದು ಅವರು ಹೇಳಿದರು. ಆ ಕಾಲಘಟ್ಟವು ಧಾರ್ಮಿಕ ಆಂದೋಲನದ ಜತೆಗೆ ಸಾಮಾಜಿಕ ಆಂದೋಲನಕ್ಕೂ ಸಾಕ್ಷಿಯಾಯಿತು. ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳಿಗೆ ಅವಕಾಶ ಕಲ್ಪಿಸಿದ ಮಹತ್ವದ ಯುಗವಾಗಿತ್ತು ಎಂದು ಹೇಳಿದರು.
ಶಿರಸ್ತೆದಾರ್ ಸಂತೋಷ್, ವಿಷಯ ನಿರ್ವಾಹಕ ಶ್ರೀನಿವಾಸ್ ಪ್ರಸಾದ್, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.