ADVERTISEMENT

‘ಅನುದಾನ ತರುತ್ತೇನೆ, ಮಾಹಿತಿ ನೀಡಿ’

ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಶಾಸಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 13:49 IST
Last Updated 4 ಡಿಸೆಂಬರ್ 2018, 13:49 IST
ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿದರು
ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿದರು   

ದೇವನಹಳ್ಳಿ: ‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಿಂದ ಅನುದಾನ ತರುವ ಶಕ್ತಿ ಇದೆ, ಅಧಿಕಾರಿಗಳು ಏನೇನು ಆಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡಬೇಕು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆಯುಲ್ಲಿ ಮಾತನಾಡಿದರು.

‘ಅಧಿಕಾರಿಗಳು ಅಭಿವೃದ್ಧಿಯ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಈ ಹಿಂದಿನ ಸರ್ಕಾರದಲ್ಲಿ ಅನುದಾನ ಬಿಡುಗಡೆಯಾಗಿ ಆಗಿರುವ ಕಾಮಗಾರಿಗಳು ಮತ್ತು ವಿವಿಧ ಇಲಾಖೆಗಳಿಂದ ಅರ್ಹರಿಗೆ ಬಂದಿರುವ ಪ್ರೋತ್ಸಾಹ ಯೋಜನೆಗಳನ್ನು ಪಟ್ಟಿ ಮಾಡಿ ನೀಡಬೇಕು. ₹ 5 ಲಕ್ಷಕ್ಕಿಂತ ಹೆಚ್ಚು ಅನುದಾನದ ಕಾಮಗಾರಿಗಳನ್ನು ಮಾತ್ರ ಪರಿಗಣಿಸಿ’ ಎಂದರು.

ADVERTISEMENT

ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕೃಷ್ಣಪ್ಪ ಮತನಾಡಿ, ತಾಲ್ಲೂಕಿನಲ್ಲಿ ಪ್ರಸ್ತುತ 6 ನೂತನ ರಸ್ತೆ ನಿರ್ಮಾಣ ಡಾಂಬರೀಕರಣಕ್ಕೆ ₹ 35 ಕೋಟಿ ಅನುದಾನ ಬಂದಿದೆ. ಮೇಲಿನ ತೋಟದಿಂದ ನ್ಯಾಯಾಂಗ ಬಡಾವಣೆಯವರೆಗೆ ರಸ್ತೆ ಅಭಿವೃದ್ಧಿಗೆ ₹ 5 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದರು.

ಶಿಶು ಮತ್ತು ಮಹಿಳಾ ಅಭಿವೃದ್ಧಿ ಯೋಜನಾಧಿಕಾರಿ ಅಶ್ವಥಮ್ಮ ಮಾತನಾಡಿ, ಎರಡು ವರ್ಷಗಳಿಂದ ಎರಡು ಸಾವಿರ ಮಹಿಳೆಯರಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿಲ್ಲ ಎಂದರು.

ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿ, ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಿದ್ಧತೆಯಾಗಿದೆ, ಪುರಸಭೆ ಮುಂಭಾಗದಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ಭೂಮಿ ಪೂಜೆ ನಡೆಸಬೇಕು ಎಂದರು.

ತಾಲ್ಲೂಕಿನಲ್ಲಿ ವಿವಿಧೆಡೆ 10 ಶುದ್ಧ ಕುಡಿಯುವ ನೀರಿನ ಘಟಕ ಮತ್ತು ರಂಗನಾಥಪುರ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್, ಬೆಸ್ಕಾಂ ಶಾಖಾ ಕಚೇರಿ ಉದ್ಘಾಟನೆಯಾಗಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಹಶೀಲ್ದಾರ್ ಎಂ. ರಾಜಣ್ಣ ಮಾತನಾಡಿ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ 94 ಸಿಸಿ ಅಡಿಯಲ್ಲಿ 1200 ಅರ್ಜಿಗಳು ನಿವೇಶನಕ್ಕಾಗಿ ಸಲ್ಲಿಸಿದ್ದಾರೆ. 800 ಅರ್ಹರನ್ನು ಆಯ್ಕೆ ಮಾಡಲಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ ಮಾತನಾಡಿ, ತಾಲ್ಲೂಕು ಪಂಚಾಯಿತಿ ವತಿಯಿಂದ 179 ಅರ್ಹರನ್ನು ನಿವೇಶನ ನೀಡಲು ಗುರುತಿಸಲಾಗಿದೆ ಎಂದರು.

ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪೊಲೀಸ್ ಠಾಣೆಗೆ ಸ್ವಂತ ಕಟ್ಟಡವಿಲ್ಲ, ಜಿಲ್ಲಾ ಮಟ್ಟದ ಹೈಟೆಕ್ ಬಸ್ ನಿಲ್ದಾಣವಾಗಬೇಕು, ತಾಲ್ಲೂಕು ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ ಎಲ್ಲ ಇಲಾಖೆ ಅಧಿಕಾರಿಗಳಿಂದ ಆಗಬೇಕಾಗಿರುವ ಕಾಮಗಾರಿ ಕುರಿತು ಮಾಸ್ಟರ್ ಪ್ಲಾನ್ ರೂಪಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.